ಲಖನೌ: ಉತ್ತರ ಪ್ರದೇಶದ ಉನ್ನಾವೋದಲ್ಲಿ 2017ರಲ್ಲಿ ನಡೆದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿರುವ ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೇಂಗಾರ್ಗೆ ದೆಹಲಿ ಕೋರ್ಟ್ ಡಿಸೆಂಬರ್ 20ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈಗ ಕುಲದೀಪ್ ಸಿಂಗ್ ಶೇಂಗಾರ್ ಅವರು ತಮಗೆ ದೆಹಲಿ ಕೋರ್ಟ್ ನೀಡಿದ ಶಿಕ್ಷೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಉನ್ನಾವೋ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಅಪರಾಧಿ ಕುಲದೀಪ್ ಸಿಂಗ್ಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ವಾದಿಸಿತ್ತು. ಅಲ್ಲದೆ, ಅವರಿಗೆ ಗರಿಷ್ಠ ಮಟ್ಟದ ಶಿಕ್ಷೆ ಪ್ರಕಟಿಸಬೇಕು ಎಂದು ಒತ್ತಾಯಿಸಿತ್ತು.
ಅತ್ಯಾಚಾರಕ್ಕೆ ಒಳಗಾದಾಗ ಯುವತಿ ಇನ್ನೂ ಬಾಲಕಿಯಾಗಿದ್ದ ಕಾರಣ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಕೇಸ್ನಲ್ಲಿ ಕುಲದೀಪ್ ಸಿಂಗ್ ಸೇಂಗಾರ್ ಅವರು ಮುಖ್ಯ ಆರೋಪಿಯಾಗಿದ್ದಾರೆ. ಅವರ ಸಹಚರ ಶಶಿ ಸಿಂಗ್ ವಿರುದ್ಧವೂ ಆರೋಪ ಕೇಳಿಬಂದಿತ್ತು. ಆದರೆ ಸರಿಯಾದ ಸಾಕ್ಷಿಗಳು ದೊರೆಯದ ಹಿನ್ನೆಲೆಯಲ್ಲಿ ಕೋರ್ಟ್ ಅವರನ್ನು ಬಿಡುಗಡೆ ಮಾಡಿತ್ತು.
ಕುಲದೀಪ್ ಸಿಂಗ್ ಸೇಂಗಾರ್ಗೆ ಜೀವಾವಧಿ ಶಿಕ್ಷೆ ನೀಡಿದರೆ ಸಾಕಾಗುವುದಿಲ್ಲ. ಅವರಿಗೆ ಮರಣದಂಡನೆಯನ್ನೇ ನೀಡಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಒತ್ತಾಯಿಸಿದೆ. (ಏಜೆನ್ಸೀಸ್)
ಉನ್ನಾವೋ ರೇಪ್ ಕೇಸ್: ಅಪರಾಧಿ ಕುಲದೀಪ್ ಸಿಂಗ್ ಸೇಂಗಾರ್ಗೆ ಜೀವಾವಧಿ ಶಿಕ್ಷೆ: ಸಂತ್ರಸ್ತೆಗೆ 10 ಲಕ್ಷ ರೂಪಾಯಿ ಪರಿಹಾರ
ಉನ್ನಾವೋ ಅಪ್ರಾಪ್ತೆ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೇಂಗಾರ್ ಅಪರಾಧಿ: ದೆಹಲಿ ನ್ಯಾಯಾಲಯದ ತೀರ್ಪು