ಅರ್ಧ ಶತಮಾನ ಬಳಿಕ ಕುಳಾಯಿ ಜೆಟ್ಟಿ ಭರವಸೆ ಕಾರ್ಯರೂಪ

ಲೋಕೇಶ್ ಸುರತ್ಕಲ್
ಕುಳಾಯಿ ಬಳಿ ಮೀನುಗಾರಿಕಾ ಜೆಟ್ಟಿಗೆ ಇಂದು ಶಿಲಾನ್ಯಾಸ ನಡೆಯಲಿದೆ. ಇದರಿಂದ 50 ವರ್ಷದ ಬಳಿಕ ಇಲ್ಲಿನ ಭರವಸೆ ಕಾರ್ಯರೂಪಕ್ಕೆ ಬರುತ್ತಿದೆ.
ಇದು ನವಮಂಗಳೂರು ಬಂದರಿಕ್ಕೆ ಜಾಗ ನೀಡಿ ನಿರ್ವಸಿತರಾಗಿ ಈ ಭಾಗದಲ್ಲಿ ನೆಲೆಸಿರುವ ಮೀನುಗಾರರಲ್ಲಿ ಅಲ್ಲದೆ ಸಸಿಹಿತ್ಲುವಿನಿಂದ ಮಂಜೇಶ್ವರವರೆಗಿನ ಮೀನುಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ. ನವಮಂಗಳೂರು ಬಂದರು ನಿರ್ಮಾಣಕ್ಕೆ ಅಂದಿನ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ 1967ರಲ್ಲಿ ಶಿಲಾನ್ಯಾಸ ನಡೆಸಿದ್ದರು. 1975 ಜನವರಿ 1ರಂದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಬಂದರು ಉದ್ಘಾಟಿಸಿದ್ದರು. ಈ ಸಂದರ್ಭ ಇಂದಿರಾ, ಬಂದರಿಗೆ ಜಾಗ ನೀಡಿ ನಿರ್ವಸಿತರಾಗಿರುವ ಮೀನುಗಾರರಿಗೆ ಮೀನುಗಾರಿಕಾ ಜೆಟ್ಟಿ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದ್ದರು ಎನ್ನುತ್ತಾರೆ ಮೀನುಗಾರರು.
ಈಗ ಇದೇ ಯೋಜನೆಯನ್ನು ಕೇಂದ್ರದ ಮಹತ್ವದ ಸಾಗರ್‌ಮಾಲಾ ಯೋಜನೆಯಲ್ಲಿ ಸೇರಿಸಲಾಗಿರುವ ಯೋಜನೆಗೆ ಹಣಕಾಸಿನ ಬಲ ಹೆಚ್ಚಾಗಿದೆ. ಅಲ್ಲದೆ ಎನ್‌ಎಂಪಿಟಿ ರಾಜ್ಯ ಸರ್ಕಾರಗಳೂ ತಮ್ಮ ಪಾಲಿನ ನೆರವು ನೀಡಲಿವೆ. ಮೊದಲಿಗೆ 45 ಕೋಟಿ ರೂ. ವೆಚ್ಚ ಅಂದಾಜಿನಲ್ಲಿದ್ದ ಈ ಯೋಜನೆ ಸುಮಾರು 198 ಕೋಟಿ ರೂ. ತಲುಪಿದೆ.
ಎನ್‌ಎಂಪಿಟಿ ಮಾನವೀಯ ನೆರವು: ನಿರ್ವಸಿತರು ಎನ್‌ಎಂಪಿಟಿಗೆ ಜಾಗ ನೀಡಿ 52 ವರ್ಷವಾಗಿದೆ. ಸುಮಾರು 30 ವರ್ಷದಿಂದ ಎನ್‌ಎಂಪಿಟಿ ಮಳೆಗಾಲದಲ್ಲಿ ಮಾನವೀಯ ನೆಲೆಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡಿದೆ. ಈಗ ಬಂದರಿನಲ್ಲಿ ಕಂಟೈನರ್ ಜೆಟ್ಟಿ ನಿರ್ಮಿಸಲಾಗುತ್ತಿರುವ ಕಾರಣ ಇನ್ನು ಮೀನುಗಾರಿಕೆ ದೋಣಿಗಳಿಗೆ ತಂಗಲು ಅವಕಾಶ 1-2ವರ್ಷ ಮಾತ್ರ ಸಿಗಬಹುದು. ಪ್ರಸ್ತಾವಿತ ಜೆಟ್ಟಿ ಸಮುದ್ರದಲ್ಲಿಯೆ ನಿರ್ಮಾಣವಾಗುತ್ತಿದೆ. ಸುಮಾರು 300-400 ನಾಡದೋಣಿಗಳಿಗೆ ಅಲ್ಲದೆ. ಯಾಂತ್ರೀಕೃತ ಬೋಟ್‌ಗಳಿಗೂ ತಂಗಲು ಅವಕಾಶ ಇರಲಿದೆ. ಯೋಜನೆ ಈಗ ಕಾರ್ಯರೂಪಕ್ಕೆ ಬರುವುದಕ್ಕೆ ಪ್ರಧಾನಿ ಮೋದಿ, ಸಚಿವ ಗಡ್ಕರಿ, ಸಂಸದ ನಳಿನ್ ಸಂಕಲ್ಪ ಕಾರಣ ಎನ್ನುತ್ತಾರೆ ನವಮಂಗಳೂರು ವಲಯ ನಾಡದೋಣಿ ಮೀನುಗಾರ ಸಂಘ ಅಧ್ಯಕ್ಷ ವಾಸುದೇವ ಬಿ.ಕೆ.

ಯೋಜನೆ ವಿಳಂಬಕ್ಕೆ ಕೇಂದ್ರ ರಾಜ್ಯ ಸರ್ಕಾರಗಳ ಔದಾಸೀನ ಅಲ್ಲದೆ ಹಣ ಯಾರು ಎಷ್ಟು ಪ್ರಮಾಣದಲ್ಲಿ ತೊಡಗಿಸಬೇಕು ಎಂಬ ಗೊಂದಲ ಕಾರಣ. ನಾನು ಶಾಸಕನಾಗಿದ್ದಾಗ ಯೋಜನೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದೆ. ಕೇಂದ್ರ ಕೃಷಿ ಸಚಿವರ ಬಳಿಗೆ ಯೋಜನೆಯ ಕಡತ ಹಿಡಿದುಕೊಂಡು ತೆರಳಿದ್ದೆ. ಈಗಲಾದರೂ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ ಎನ್ನುವುದು ಸಂತಸಕರ.
ಕೆ.ವಿಜಯ ಕುಮಾರ್ ಶೆಟ್ಟಿ ಮಾಜಿ ಶಾಸಕ