ಕುಲಶೇಖರ ರೈಲ್ವೆ ಸುರಂಗ ಕೆಲಸ ತ್ವರಿತ

>>

ಭರತ್ ಶೆಟ್ಟಿಗಾರ್ ಮಂಗಳೂರು
ನಗರದ ಕುಲಶೇಖರದಲ್ಲಿ ಕಳೆದೆರಡು ವರ್ಷದಿಂದ ನಡೆಯುತ್ತಿರುವ ಕುಲಶೇಖರ-ಪಡೀಲ್ ರೈಲ್ವೆ ಸುರಂಗ ಮಾರ್ಗ ಕಾಮಗಾರಿ ವೇಗ ಪಡೆದಿದ್ದು, ಸುಮಾರು 200 ಮೀ. ಕೆಲಸ ಪೂರ್ಣಗೊಂಡಿದೆ.

ಪಡೀಲ್- ಜೋಕಟ್ಟೆ ನಡುವಿನ ರೈಲು ಮಾರ್ಗದ ಡಬ್ಲಿಂಗ್ ಹಿನ್ನೆಲೆಯಲ್ಲಿ ಈ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಕುಲಶೇಖರದಲ್ಲಿ ನಗರದ ಏಕೈಕ ರೈಲ್ವೆ ಸುರಂಗ ಮಾರ್ಗ ಹಾದು ಹೋಗಿದ್ದು, 1960ರ ವೇಳೆಗೆ ಇದನ್ನು ನಿರ್ಮಿಸಲಾಗಿತ್ತು. ಈಗ ಅದಕ್ಕೆ ಸಮಾನಾಂತರವಾಗಿ 30 ಮೀ.ದೂರದಲ್ಲಿ ಈ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗಕ್ಕೆ ಸೇರಿದ ಜೋಕಟ್ಟೆ ಸ್ಟೇಷನ್ ಮತ್ತು ಮಂಗಳೂರು ಜಂಕ್ಷನ್ ನಡುವಿನ ಕುಲಶೇಖರದಿಂದ – ಪಡೀಲ್‌ವರೆಗೆ ಹೊಸ ಸುರಂಗ ನಿರ್ಮಾಣವಾಗುತ್ತಿದೆ.

675 ಮೀ ಉದ್ದದ ಸುರಂಗ: ಪಡೀಲ್‌ನಿಂದ ಆರಂಭಗೊಂಡು ಕುಲಶೇಖರ ತನಕ ಸುರಂಗ ಮಾರ್ಗದ ಒಟ್ಟು ಉದ್ದ 675 ಮೀ. ಇದರಲ್ಲಿ 200 ಮೀ. ಕಾಮಗಾರಿ ಪೂರ್ಣಗೊಂಡಿದೆ. ಆರಂಭಿಕ ಹಂತದಲ್ಲಿ ಗುಡ್ಡದಲ್ಲಿ ಸುರಂಗ ಕೊರೆಯುವುದು ಕಷ್ಟದ ಕೆಲಸವಾಗಿತ್ತು, ಈಗ ಸರಾಗವಾಗಿ ನಡೆಯುತ್ತಿದೆ. ಬೆಳಗ್ಗೆ ಹಾಗೂ ರಾತ್ರಿ ಪಾಳಿಯಲ್ಲಿ ಕೆಲಸ ನಡೆಯುತ್ತಿದ್ದು, ತಲಾ 40 ಮಂದಿ ಯಂತ್ರೋಪಕರಣಗಳ ಸಹಿತ ಕೆಲಸ ಮಾಡುತ್ತಿದ್ದಾರೆ. ಸಮಾನಾಂತರ ಸುರಂಗದಲ್ಲಿ ರೈಲು ಸಾಗುತ್ತಿರುವಂತೆಯೇ ಕೆಲಸಗಳು ನಡೆಯುತ್ತವೆ. ಕೆಲಸದಿಂದ ರೈಲು ಹಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಸ್ಥಳದಲ್ಲಿರುವ ರೈಲ್ವೆ ಇಂಜಿನಿಯರ್‌ಗಳು.

ಸುರಂಗ ಮಾರ್ಗದಲ್ಲಿದೆ ಬಂಡೆ ಕಲ್ಲುಗಳು: ಸುರಂಗ ಒಳಗಿರುವುದು ಜೇಡಿ ಮಣ್ಣಾಗಿದ್ದು, ಬೃಹತ್ ಬಂಡೆ ಕಲ್ಲುಗಳು ಮಾರ್ಗ ಮಧ್ಯದಲ್ಲಿವೆ. ಅವುಗಳನ್ನು ಒಡೆಯುವ (ರಾಕ್ ಬ್ಲಾಸ್ಟಿಂಗ್) ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ಸುರಂಗದಲ್ಲಿ ಪ್ರತಿ ಅರ್ಧ ಮೀಟರ್‌ಗೊಂದರಂತೆ ಕಬ್ಬಿಣದ ಅರ್ಧವೃತ್ತಾಕಾರದ ಪಟ್ಟಿ ಅಳವಡಿಸಲಾಗುತ್ತಿದೆ. ಇಂಜಿನಿಯರಿಂಗ್ ಭಾಷೆಯಲ್ಲಿ ಇದನ್ನು ಸ್ಟೀಲ್ ಸರ್ಪೋಟ್ ಅಥವಾ ರಿಬ್ ಸಪೋರ್ಟ್ ಎಂದು ಕರೆಯಲಾಗುತ್ತದೆ. ಬಳಿಕ ಕಾಂಕ್ರೀಟ್ ಹಾಕಿ ಮುಚ್ಚುತ್ತಾರೆ. ಇದು ಮೇಲ್ಭಾಗದಿಂದ ಭೂಮಿ ಕುಸಿಯದಂತೆ ತಡೆಯುತ್ತದೆ.

ಮುನ್ನೆಚ್ಚರಿಕೆ, ತಪಾಸಣೆ: ಸುರಂಗ ಹಾದು ಹೋಗುವಲ್ಲಿ ಮೇಲ್ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಿದ್ದು, ಜನವಸತಿಯಿರುವ ಪ್ರದೇಶವೂ ಆಗಿದೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ನಡೆಸಲಾಗುತ್ತಿದೆ. ಸುರಂಗದ ಒಳಗೆ ಬೇಸಿಗೆಯಲ್ಲೂ ನೀರಿನ ಒಸರು ಕಂಡು ಬರುತ್ತದೆ. ಮಳೆಗಾಲದಲ್ಲಂತೂ ಝರಿಯಂತೆ ನೀರು ಹರಿದು ಬರುತ್ತದೆ. ಇದರ ನಡುವೆ ಕೆಲಸ ನಿರ್ವಹಿಸಬೇಕಾಗಿದೆ. ಈ ಬಾರಿ ಮಳೆಗಾಲದಲ್ಲಿಯೂ ಕೆಲಸ ನಿರ್ವಹಿಸಲು ನಿರ್ಧರಿಸಲಾಗಿದೆ. ರೈಲ್ವೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟದ ಬಗ್ಗೆ ತಪಾಸಣೆ ನಡೆಸುತ್ತಿದ್ದಾರೆ. ಸುರಂಗದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಸುರಂಗವನ್ನು ಯಾವ ರೀತಿ ಮುಂದಕ್ಕೆ ಕೊರೆಯಬೇಕು ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ದಕ್ಷಿಣ ರೈಲ್ವೆಯ ಚೀಫ್ ಇಂಜಿನಿಯರ್, ಮುಖ್ಯ ಆಡಳಿತಾಧಿಕಾರಿ (ಸಿಎಒ) ಎ.ಕೆ.ಸಿನ್ಹ ನಿರಂತರವಾಗಿ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.

ಮಣ್ಣ ಕುಸಿದು ಆತಂಕ: ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿರುವ ಸಂದರ್ಭ ಕೆಲವು ತಿಂಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಮೇಲ್ಭಾಗದಲ್ಲಿ ಮಣ್ಣು ಕುಸಿದು ಆತಂಕಕೆ ಕಾರಣವಾಗಿತ್ತು. ಕುಲಶೇಖರ ಮುಖ್ಯರಸ್ತೆಯ ಬಲಗಡೆಯಲ್ಲಿ ಈ ರೀತಿ ಸಂಭವಿಸಿತ್ತು. ಮೊದಲೇ ಮುನ್ಸೂಚನೆ ಇದ್ದುದರಿಂದ ಯಾವುದೇ ಅಪಾಯ, ಹಾನಿ ಉಂಟಾಗಿಲ್ಲ. ಪ್ರಸ್ತುತ ಕಾಂಕ್ರೀಟ್ ಹಾಕಿ ಬಿರುಕು ಸರಿಪಡಿಸುವ ಕೆಲಸಗಳು ನಡೆಯುತ್ತಿವೆ.

ಸುರಂಗದ ಎರಡೂ ತುದಿಗಳಲ್ಲಿ ಆರಂಭಿಕ ಕೆಲಸಗಳು ಹೆಚ್ಚು ತ್ರಾಸದಾಯಕವಾಗಿತ್ತು. ಈಗ ಎರಡೂ ಬದಿಯಲ್ಲಿ ಹಲವು ಮೀಟರ್‌ಗಳಷ್ಟು ಒಳಗೆ ಕೆಲಸ ನಡೆಯತ್ತಿದೆ. ಬೃಹತ್ ಬಂಡೆಗಳಿದ್ದು, ಅದನ್ನು ಒಡೆಯುತ್ತಾ ಮುಂದೆ ಸಾಗಬೇಕು. ದಿನ-ರಾತ್ರಿ ನಿರಂತರ ಕೆಲಸ ನಡೆಯುತ್ತಿದೆ. ಮಾರ್ಚ್ 2020ರ ವೇಳೆಗೆ ಸುರಂಗ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಬಳಿಕ ಟ್ರಾೃಕ್ ನಿರ್ಮಾಣದ ಕೆಲಸಗಳು ನಡೆಯಲಿವೆ.
– ಕೈಲಾಶ್ ವೇಣುಗೋಪಾಲನ್, ಸೆಕ್ಷನ್ ಇಂಜಿನಿಯರ್

Leave a Reply

Your email address will not be published. Required fields are marked *