ಕುಳಗೇರಿ ಕ್ರಾಸ್ ಬ್ಯಾಂಕ್​ನಲ್ಲಿ ಕಳ್ಳತನ

ಬಾದಾಮಿ: ತಾಲೂಕಿನ ಕುಳಗೇರಿ ಕ್ರಾಸ್​ನಲ್ಲಿರುವ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕ್ ಶಾಖೆಯಲ್ಲಿ ಗುರುವಾರ ರಾತ್ರಿ ಕಳ್ಳರು 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದು ದೋಚಿದ್ದಾರೆ.

ಬ್ಯಾಂಕ್ ಹಿಂಬದಿಯ ಕಿಟಕಿಯ ಕಬ್ಬಿಣದ ಸರಳುಗಳನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ ಒಳನುಗ್ಗಿದ ಕಳ್ಳರು ಲಾಕರ್ ಮುರಿದು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಬ್ಯಾಂಕ್​ನ ಸ್ಟ್ರಾಂಗ್​ರೂಂನ ಎಚ್ಚರಿಕೆ ಗಂಟೆ (ಸೈರನ್) ಕೇಬಲ್ ಕತ್ತರಿಸಿ, ಒಳಗಿನ ಸಿಸಿ ಕ್ಯಾಮರಾ ಬೇರೆಡೆ ತಿರುಗಿಸಿ ಖದೀಮರು ಕೈಚಳಕ ತೋರಿಸಿದ್ದಾರೆ.

ಬೆಳಗ್ಗೆ ಸಿಬ್ಬಂದಿ ಬ್ಯಾಂಕ್​ಗೆ ಬಂದಾಗಲೇ ಕಳ್ಳತನ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಎಸ್​ಪಿ ರಿಷ್ಯಂತ, ಡಿವೈಎಸ್​ಪಿ ಗಿರೀಶಗೌಡ, ಸಿಪಿಐ ಕೆ.ಎಸ್. ಹಟ್ಟಿ, ಪಿಎಸ್​ಐ ಎಚ್.ಎಸ್. ನಡಗಡ್ಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು ಈ ಕುರಿತು ಬ್ಯಾಂಕ್ ವ್ಯವಸ್ಥಾಪಕ ಬಿ.ಬಿ. ಮಾಡಲಗೇರಿ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.