< ಕೈತಪ್ಪಲಿದೆ ಸುಳ್ಯದ 7 ಗ್ರಾಮಗಳು * ಸುಬ್ರಹ್ಮಣ್ಯಕ್ಕೆ ಅನುಕೂಲ>
ರತ್ನಾಕರ ಸುಬ್ರಹ್ಮಣ್ಯ
ಕಡಬ ತಾಲೂಕು ಅಸ್ತಿತ್ವಕ್ಕೆ ಬರುವುದರೊಂದಿಗೆ ಭೌಗೋಳಿಕವಾಗಿ ರಾಜ್ಯದ ಚಿಕ್ಕ ತಾಲೂಕುಗಳಲ್ಲಿ ಒಂದಾದ ಸುಳ್ಯ ಮತ್ತಷ್ಟು ಕಿರಿದಾಗಲಿದೆ. ತಾಲೂಕಿಗೆ ಮುಕುಟಪ್ರಾಯವಾಗಿದ್ದ ರಾಜ್ಯದ ನಂಬರ್ ವನ್ ಆದಾಯ ಬರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಕಡಬ ತಾಲೂಕಿನ ತೆಕ್ಕೆಗೆ ಜಾರಲಿದೆ.
ಬಹುಕಾಲದ ಬೇಡಿಕೆಯ ಬಳಿಕ ನೂತನ ಕಡಬ ತಾಲೂಕು ಅಸ್ತಿತ್ವಕ್ಕೆ ಬರುತ್ತಿದ್ದು, ಸುಳ್ಯ ತಾಲೂಕಿನ 7 ಗ್ರಾಮಗಳಾದ ಯೇನೆಕಲ್ಲು, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಮತ್ತು ಎಡಮಂಗಲ ಗ್ರಾಮಗಳು ಕಡಬಕ್ಕೆ ಸೇರಲಿವೆ. ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ, ಚಾರಿತ್ರಿಕ ವೀರರಾದ ಕೋಟಿ-ಚೆನ್ನಯ್ಯರ ಎಣ್ಮೂರು ಆದಿ ಬೈದೆರುಗಳ ಗರಡಿ, ಐತಿಹಾಸಿಕ ದೇವಾಲಯಗಳನ್ನೊಳಗೊಂಡ ಸಂಸದರ ಆದರ್ಶ ಗ್ರಾಮ ಬಳ್ಪ ಕೂಡ ಕಡಬಕ್ಕೆ ಸೇರುತ್ತದೆ.
ಕೈ ತಪ್ಪಿತು ರೈಲು ನಿಲ್ದಾಣ: ಸುಳ್ಯ ತಾಲೂಕಿನಲ್ಲಿರುವ ಎಡಮಂಗಲವು ಕಡಬಕ್ಕೆ ಸೇರ್ಪಡೆಗೊಳ್ಳುವುದರಿಂದ ತಾಲೂಕಿನ ಏಕೈಕ ರೈಲು ನಿಲ್ದಾಣ ಕೈತಪ್ಪಿದೆ. ಸುಳ್ಯದವರಿಗೆ ಪ್ರಯಾಣಕ್ಕೆ ಅಷ್ಟು ಉಪಯುಕ್ತವಲ್ಲವಾದರೂ ತಾಂತ್ರಿಕವಾಗಿ ಇದು ಹೊಡೆತ. ಈಗ ಕಡಬಕ್ಕೆ ಸುಬ್ರಹ್ಮಣ್ಯ ರೋಡ್ ನೆಟ್ಟಣ ಮತ್ತು ಎಡಮಂಗಲ ರೈಲು ನಿಲ್ದಾಣ ಸೇರುವುದರಿಂದ ತಾಲೂಕಿನಲ್ಲಿ ಅವಳಿ ರೈಲು ನಿಲ್ದಾಣ ಇದ್ದಂತಾಗುತ್ತದೆ.
ಸುಳ್ಯ ತಾಲೂಕಿನಿಂದ ಕುಕ್ಕೆ ಕೈತಪ್ಪುವುದು ಸುಳ್ಯ ತಾಲೂಕಿನ ಜನತೆಗೆ ನೋವಿನ ಸಂಗತಿ. ಯಾವುದೇ ಭಾಗಕ್ಕೆ ತೆರಳಿದರೂ ಕುಕ್ಕೆಯ ಹೆಸರನ್ನು ಬಳಸಿ ಗುರುತಿಸಿಕೊಳ್ಳುವುದು ತಾಲೂಕಿನ ಜನರಿಗೆ ಸುಲಭವಾಗಿತ್ತು. ಆದರೆ ಈಗ ಸುಳ್ಯ ತಾಲೂಕಿಗೆ ಗುರುತು ಚೀಟಿಯಂತಿದ್ದ ಕುಕ್ಕೆಯು ಸುಳ್ಯದಿಂದ ಕಳಚಿಕೊಳ್ಳುತ್ತಿದೆ. ಸುಳ್ಯಕ್ಕೆ ಹೋಲಿಸಿದರೆ ಕಡಬವು ಕುಕ್ಕೆಗೆ ಹತ್ತಿರವಾಗಿದೆ. ಕೇವಲ 22 ಕಿ.ಮೀ. ದೂರದಲ್ಲಿ ತಾಲೂಕು ಕೇಂದ್ರ ಇರುವುದರಿಂದ ಸರ್ಕಾರಿ ಕಚೇರಿ ಸೇರಿದಂತೆ ಇತರ ವ್ಯವಹಾರಗಳಿಗೆ ಇದು ಉಪಯುಕ್ತವಾದ ತಾಣವಾಗಿದೆ.
ತಾಲೂಕಿನ ಗ್ರಾಮ, ಜನಸಂಖ್ಯೆ:
– 2011ರ ಜನಗಣತಿ ಪ್ರಕಾರ ಸುಳ್ಯ ತಾಲೂಕಿನ ಜನಸಂಖ್ಯೆ: 1,45,226
– ಸುಳ್ಯದ ಒಟ್ಟು ಗ್ರಾಮಗಳು: 41
– ಕಡಬ ತಾಲೂಕಿಗೆ ಸೇರುವ ಗ್ರಾಮಗಳು: 07
– ಸುಳ್ಯದಲ್ಲಿ ಉಳಿದುಕೊಳ್ಳುವ ಗ್ರಾಮಗಳು: 34
– ಸೇರ್ಪಡೆಗೊಳ್ಳುವ ಗ್ರಾಮಗಳ ಜನಸಂಖ್ಯೆ: ಸುಬ್ರಹ್ಮಣ್ಯ 4443, ಯೇನೆಕಲ್ಲು 2684, ಐನೆಕಿದು 949, ಬಳ್ಪ 2973, ಕೇನ್ಯ 1185, ಎಣ್ಮೂರು 1679, ಎಡಮಂಗಲ 3698.
ಕುಕ್ಕೆಸುಬ್ರಹ್ಮಣ್ಯಕ್ಕೆ ಹತ್ತಿರವಾದ ಕಡಬ ತಾಲೂಕು ಕೇಂದ್ರವಾಗಿರುವುದು ಸಂತಸ ವಿಷಯ. ಕಚೇರಿ ಕೆಲಸ ಸೇರಿದಂತೆ ಇತರ ವ್ಯವಹಾರಕ್ಕೆ ಕುಕ್ಕೆಯ ಜನತೆಗೆ ಹತ್ತಿರವಾದ ಕಡಬ ಕೇಂದ್ರವು ಹೆಚ್ಚು ಅನುಕೂಲಕರವಾಗಿದೆ.
– ನಿತೇಶ್ ಎಂ. ಸುಬ್ರಹ್ಮಣ್ಯ