ಕುಕ್ಕೆ ಕ್ಷೇತ್ರದಲ್ಲಿ ಜಲ ಸಮೃದ್ಧಿ

ರತ್ನಾಕರ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿಯಲ್ಲಿ ಬಿರು ಬೇಸಿಗೆಯಲ್ಲೂ ನೀರಿನ ಹರಿವು ಸಮೃದ್ಧವಾಗಿದೆ. ಕುಕ್ಕೆ ಮತ್ತು ನದಿ ಉಗಮ ಸ್ಥಾನ ಕುಮಾರ ಪರ್ವತದಲ್ಲಿ ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಕ್ಷೇತ್ರದಲ್ಲಿ ನೀರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಿಲ್ಲ. ನದಿಯಲ್ಲಿ ಜಲ ಸಮೃದ್ಧಿಯಿದ್ದು, ಜನರ ದಾಹ ತಣಿಸುವ ಜತೆಗೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೂ ಸಾಕಷ್ಟು ನೀರಿದೆ.

ದೇವಳದಿಂದ ಕುಮಾರಧಾರಾ ನೀರನ್ನು ಸಮರ್ಪಕವಾಗಿ ಉಪಯೋಗಿಸಲು ವ್ಯವಸ್ಥಿತ ಯೋಜನೆ ಇರುವುದರಿಂದ ನೀರಿಗೆ ಬರವಿಲ್ಲ.
ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎಲ್ಲೆಡೆ ಕಂಡುಬಂದರೂ ಕುಮಾರಧಾರಾ ನದಿ ಹರಿಯುವ ಪ್ರದೇಶದಲ್ಲಿ ಬರದ ಛಾಯೆ ಆವರಿಸುವುದಿಲ್ಲ. ಈ ನದಿ ಬೇಸಿಗೆಯಲ್ಲೂ ಸಮೃದ್ಧವಾಗಿ ಹರಿಯುತ್ತದೆ. ಈ ಬಾರಿ ಬೇಸಿಗೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಕುಮಾರಧಾರಾದ ಹರಿವಿನಲ್ಲಿ ವ್ಯತ್ಯಯ ಉಂಟಾಗಿ ನೀರ ಹರಿವು ಕಡಿಮೆಯಾದರೂ ಕುಡಿಯುವ ನೀರಿಗೆ ಬರ ಬಂದಿಲ್ಲ.

ಕಿಂಡಿ ಅಣೆಕಟ್ಟು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀರಿನ ಪೂರೈಕೆಗೆ ವ್ಯವಸ್ಥಿತ ಯೋಜನೆ ಇದೆ. ಕುಮಾರಧಾರಾ ಸೇತುವೆ ಬಳಿ ಕುಕ್ಕೆ ದೇವಳದಿಂದ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಅಧಿಕ ನೀರು ಸಂಗ್ರಹವಾಗಿ ಕ್ಷೇತ್ರ ಪರಿಸರದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಸುಬ್ರಹ್ಮಣ್ಯ, ಕುಲ್ಕುಂದ, ನೂಚಿಲ, ದೇವರಗದ್ದೆ ಪರಿಸರದಲ್ಲಿ ಬಾವಿಗಳು ಜಲ ಸಮೃದ್ಧಿಯಿಂದ ತುಂಬಿದೆ. ಕಿಂಡಿ ಅಣೆಕಟ್ಟಿನಿಂದ ಹರಿವಿಗೆ ಅನುಗುಣವಾಗಿ ನೀರು ಮುಂದಕ್ಕೆ ಬಿಡಲಾಗುತ್ತಿದೆ. ಸದ್ಯ ಕಡಿಮೆ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟಿನಿಂದ ನೀರು ಬಿಡುವ ಕಾರಣ ಸ್ನಾನ ಘಟ್ಟದ ಮುಂಭಾಗ ಮರಳಿನ ಚೀಲಗಳಿಂದ ತಾತ್ಕಾಲಿಕ ತಡೆ ನಿರ್ಮಿಸಿ ಭಕ್ತರಿಗೆ ಸ್ನಾನ ಮಾಡಲು ಬೇಕಾದಷ್ಟು ವ್ಯವಸ್ಥೆ ಮಾಡಲಾಗಿದೆ.
ದೇವರಕೊಳ್ಳದಿಂದ ನೀರು.

ಕುಕ್ಕೆ ದೇವಳ ಮತ್ತು ದೇವಳದ ವಸತಿಗೃಹಗಳಿಗೆ ಕುಮಾರಧಾರಾದ ಉಪನದಿ ದರ್ಪಣತೀರ್ಥಕ್ಕೆ ಅರಣ್ಯದ ನಡುವಿನ ದೇವರಕೊಳ್ಳ ಎಂಬಲ್ಲಿ ನೀರಿನ ಒಡ್ಡು ನಿರ್ಮಿಸಿ ಅಲ್ಲಿಂದ ನೀರು ಸಾಗಿಸುವ ವ್ಯವಸ್ಥೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈ ಬಾರಿಯೂ ಈ ಒಡ್ಡಿನಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಇಲ್ಲಿಂದ ನೀರು ಕುಕ್ಕೆಗೆ ಸರಾಗವಾಗಿ ಹರಿದು ಬರುತ್ತಿದೆ.

ಸಮಗ್ರ ಕುಡಿಯುವ ನೀರಿನ ಯೋಜನೆ:  ಕ್ಷೇತ್ರದ ಭಕ್ತರಿಗೆ ಮಾತ್ರವಲ್ಲದೆ ಕುಕ್ಕೆ ನಿವಾಸಿಗಳಿಗೆ ಸಹಕಾರಿಯಾಗಲು ಸಮಗ್ರ ಕುಡಿಯುವ ಯೋಜನೆ ದೇವಳದಿಂದ ಮಾಡಲಾಗಿದೆ. ದೇವಸ್ಥಾನದ 180 ಕೋಟಿ ರೂ. ಮಾಸ್ಟರ್ ಪ್ಲಾನ್ ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿ 9.39 ಕೋಟಿ ರೂ.ಗಳಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ವ್ಯವಸ್ಥಿತವಾಗಿ ನೆರವೇರಿದೆ. ಸುಬ್ರಹ್ಮಣ್ಯ ದೇವಸ್ಥಾನದಿಂದ ನೀರು ಸರಬರಾಜು ಮಂಡಳಿ ಮೂಲಕ ಕ್ಷೇತ್ರಕ್ಕೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಇದರಿಂದ ವರ್ಷದ 365 ದಿನವೂ ನೀರಿನ ಕೊರತೆ ಬಾರದಂತೆ ಸೂಕ್ತ ಯೋಜನೆ ರೂಪಿಸಲಾಗಿದೆ. ಕಳೆದ ವರ್ಷ ಈ ಯೋಜನೆ ಉದ್ಘಾಟನೆಗೊಂಡ ಬಳಿಕ ನೀರಿನ ಸಮಸ್ಯೆ ಎದುರಾಗಿಲ್ಲ.

ಗ್ರಾಪಂನಿಂದ ಕುಡಿಯುವ ನೀರಿನ ಯೋಜನೆ
ಕುಕ್ಕೆ ನೂಚಿಲದಲ್ಲಿನ ಎತ್ತರದ ಪ್ರದೇಶದಲ್ಲಿ ಗ್ರಾಪಂನಿಂದ ಪ್ರಾಕೃತಿಕ ನೀರು ವ್ಯವಸ್ಥಿತವಾಗಿ ಉಪಯೋಗಿಸಲು ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ ಹಲವು ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ಪರ್ವತ ಮತ್ತು ಗುಡ್ಡ ಪ್ರದೇಶದಿಂದ ಹರಿದು ಬರುವ ನೀರು ಉಪಯೋಗಿಸಿಕೊಂಡು ಕುಕ್ಕೆಗೆ ವ್ಯವಸ್ಥಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದು ಸ್ಥಳೀಯರಿಗೆ ಮತ್ತು ಭಕ್ತರ ಉಪಯೋಗಕ್ಕೆ ಲಭ್ಯವಿದೆ. ಇಲ್ಲಿನ ಅಗ್ರಹಾರದಲ್ಲಿ ಗ್ರಾಪಂ ಜಾಕ್‌ವೆಲ್ ನಿರ್ಮಿಸಿದೆ. ಈ ಮೂಲಕ ದೊಡ್ಡ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ ಕ್ಷೇತ್ರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಯೋಜನೆಗಳು ಅಧಿಕವಾಗಿರುವುದರಿಂದ ಈ ಯೋಜನೆಯ ಉಪಯೋಗ ಕಡಿಮೆ ಮಾಡಲಾಗಿದೆ.

ಕ್ಷೇತ್ರಕ್ಕೆ ಸದ್ಯ ಕುಡಿಯುವ ನೀರಿಗೆ ತೊಂದರೆ ಇಲ್ಲ. ಕುಮಾರಧಾರಾ ಬೇಸಿಗೆಯಲ್ಲೂ ಜಲ ಸಮೃದ್ಧಿಯಿಂದ ಹರಿಯುತ್ತಿರುವುದರಿಂದ ನೀರಿನ ಅಭಾವ ಇಲ್ಲ. ದೇವಳದಿಂದ ಕಿಂಡಿ ಅಣೆಕಟ್ಟು ಕಟ್ಟಿ ಆ ಮೂಲಕ ನೀರು ಉಪಯೋಗಿಸುವ ಮಹತ್ತರ ಯೋಜನೆಗಳು ಸಮರ್ಪಕವಾಗಿವೆ. 9.39 ಕೋಟಿ ರೂ. ವೆಚ್ಚದಲ್ಲಿ ಕುಕ್ಕೆ ದೇವಳದಿಂದ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ನಿರ್ಮಿತವಾದ ಸಮಗ್ರ ಕುಡಿಯುವ ನೀರಿನ ಯೋಜನೆಯಿಂದ ಕ್ಷೇತ್ರಕ್ಕೆ ನೀರಿನ ವ್ಯವಸ್ಥೆ ಸಮರ್ಪಕವಾಗಿ ಲಭ್ಯವಾಗುವಂತೆ ಮಾಡಿದೆ. ಆಗಾಗ ಮಳೆಯಾಗುತ್ತಿರುವುದರಿಂದಲೂ ನೀರಿಗೆ ಸಮಸ್ಯೆ ಎದುರಾಗಿಲ್ಲ.
ನಿತ್ಯಾನಂದ ಮುಂಡೋಡಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

Leave a Reply

Your email address will not be published. Required fields are marked *