ಎನ್‌ಡಿಎಗೆ ಪ್ರಚಂಡ ಗೆಲುವು ಹಿನ್ನೆಲೆ ಕುಕ್ಕೆ ಪುರುಷರಾಯನಿಗೆ ಒಂಟಿ ನೇಮ

ಸುಬ್ರಹ್ಮಣ್ಯ: ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಪ್ರಚಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುಕ್ಕೆ ಕ್ಷೇತ್ರದ ಕಾರಣಿಕ ಪುರುಷರಾಯ ದೈವಕ್ಕೆ ಹರಕೆ ಒಂಟಿ ನೇಮ ಶನಿವಾರ ರಾತ್ರಿ ನಡೆಯಿತು.
ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿಯಾಗಿ ಬಹುಮತದಿಂದ ಆಯ್ಕೆಯಾದರೆ ಕುಕ್ಕೆ ಕ್ಷೇತ್ರದ ಕಾರಣಿಕ ಪುರುಷರಾಯ ದೈವಕ್ಕೆ ಒಂಟಿ ನೇಮ ನೀಡುವುದಾಗಿ ಕುಕ್ಕೆ ಸುಬ್ರಹ್ಮಣ್ಯದ ಮೋದಿ ಅಭಿಮಾನಿ ಬಳಗವು ಹರಕೆ ಹೊತ್ತಿತ್ತು. ಮೋದಿ ನೇತೃತ್ವದ ಎನ್‌ಡಿಎ ಪ್ರಚಂಡ ಗೆಲುವು ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸುಬ್ರಹ್ಮಣ್ಯದ ಮೋದಿ ಅಭಿಮಾನಿಗಳು ಕುಕ್ಕೆ ಕಾರಣಿಕ ದೈವ ಪುರುಷರಾಯನಿಗೆ ಒಂಟಿ ನೇಮ ಸೇವೆ ಅರ್ಪಿಸಿ ಹರಕೆ ತೀರಿಸಿದರು.

ಧರ್ಮ ಸಮ್ಮೇಳನ ಮಂಟಪದ ಸಮೀಪ ಒಂಟಿ ನೇಮ ನೆರವೇರಿತು. ನೇಮ ನಡಾವಳಿ ಬಳಿಕ ಸುಬ್ರಹ್ಮಣ್ಯ ಮೋದಿ ಅಭಿಮಾನಿ ವೃಂದದ ಸದಸ್ಯರಾದ ಶ್ರೀಕುಮಾರ್ ನಾಯರ್ ಬಿಲದ್ವಾರ ದೈವದಿಂದ ಪ್ರಸಾದ ಸ್ವೀಕರಿಸಿದರು. ಅಭಿಮಾನಿ ಬಳಗದ ಗುರುಪಾದ ಬೆಳ್ಳಿ ಅಂಗಡಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ಪುರುಷರಾಯ ಒಂಟಿನೇಮ ವಿಶೇಷ:  ಒಂಟಿನೇಮವು ಪುರುಷರಾಯನಿಗೆ ನಡೆಯುವ ಹರಕೆಯ ಸೇವೆಯಾಗಿದೆ. ಕ್ಷೇತ್ರದಲ್ಲಿ ಊರಿನ ಮಾರಿ ಓಡಿಸುವ ಸಂಪ್ರದಾಯದ ಬಳಿಕ ಜನವರಿಯಿಂದ ಪುರುಷರಾಯನಿಗೆ ಒಂಟಿ ನೇಮ ನಡೆಯುತ್ತದೆ. ಉರಿಮಾರಿಯ ಬಳಿಕದಿಂದ ಬೇಸ ಶುದ್ಧ ಷಷ್ಠಿ ತನಕ ಒಂಟಿ ನೇಮ ನಡೆಯುತ್ತದೆ. ತಿಂಗಳಲ್ಲಿ ಎರಡು ಬಾರಿ ಸಪ್ತಮಿಯ ದಿನ ದೇವಳದಲ್ಲಿ ಒಂಟಿ ನೇಮ ಇರುತ್ತದೆ. ಒಂದು ಬಾರಿ ನಡೆಯುವ ಒಂಟಿ ನೇಮದಲ್ಲಿ 18ರಿಂದ 20 ಭಕ್ತರು ಒಂಟಿ ನೇಮೋತ್ಸವದ ಸೇವೆ ಅರ್ಪಿಸುತ್ತಾರೆ. ಸಾಮಾನ್ಯವಾಗಿ ಜನವರಿಯಿಂದ ಜೂನ್‌ನಲ್ಲಿ ದೇವರ ಉತ್ಸವಗಳು ಕೊನೆಯಾಗುವ ದಿನದ ತನಕ ಭಕ್ತರು ನಿರಂತರವಾಗಿ ಒಂಟಿ ನೇಮ ಸೇವೆ ಅರ್ಪಿಸುತ್ತಾರೆ.

Leave a Reply

Your email address will not be published. Required fields are marked *