ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಸಲ್ಲದು- ಸಾಹಿತಿ ಶಂಭು ಬಳಿಗಾರ ವಿರೋಧ

ಜಿಲ್ಲಾಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ವಿ.ಕೆ. ರವೀಂದ್ರ/ ಅಮರೇಶ್ವರಸ್ವಾಮಿ ಕಂದಗಲ್ಲಮಠ

ದಿ.ಶಂಕ್ರಪ್ಪ ಯರಾಶಿ ವೇದಿಕೆ, ಬನ್ನಿಕೊಪ್ಪ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದು ಸರಿಯಲ್ಲ ಎಂದು ಜನಪದ ಸಾಹಿತಿ ಶಂಭು ಬಳಿಗಾರ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು.

ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಕಸಾಪ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರವೇ ಆಂಗ್ಲ ಮಾಧ್ಯಮಕ್ಕೆ ಪ್ರೇರಣೆ ನೀಡುತ್ತಿರುವುದು ದುರಂತ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದ್ದಕ್ಕೆ ಕನ್ನಡ ಸಾಮ್ರಾಜ್ಯ ಸ್ಥಾಪನೆಯಾಯಿತು. ಕೇಂದ್ರ ಸರ್ಕಾರ ಎಲ್ಲ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಬರೆಯಲು ಅನುಕೂಲ ಮಾಡಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದರು.

ಸರ್ಕಾರಿ ಶಾಲೆಯ ಶಿಕ್ಷಕರು ಮೆರಿಟ್ ಮೇಲೆ ಆಯ್ಕೆಯಾಗಿದ್ದಾರೆ. ಆದರೂ ವಿದ್ಯಾರ್ಥಿಗಳನ್ನು ಕನ್ನಡ ಶಾಲೆಯತ್ತ ಸೆಳೆಯಲು ವಿಫಲರಾಗಿದ್ದಾರೆ. ಅದನ್ನು ಸವಾಲಾಗಿ ಸ್ವೀಕರಿಸಿ. ಮಕ್ಕಳಿಗೆ ಪಾಠದೊಂದಿಗೆ ಪತ್ರಿಕೆ ಓದುವುದನ್ನು ಕಲಿಸಿಕೊಡಬೇಕು. ಶಾಲೆಗೆ ಹೋಗುವಾಗ ದಿನ ಪತ್ರಿಕೆ ಕೊಂಡೊಯ್ದು ವಿದ್ಯಾರ್ಥಿಗಳಿಂದ ಓದಿಸಬೇಕು ಎಂದು ಸಲಹೆ ನೀಡಿದರು.

ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಸಮ್ಮೇಳನ ಅಧ್ಯಕ್ಷರ ನುಡಿ ಪುಸ್ತಕ ಬಿಡುಗಡೆ ಗೊಳಿಸಿದರು. ಕಸಾಪ ಕಾರ್ಯಕಾರಣಿ ಸದಸ್ಯ ಶೇಖರಗೌಡ ಮಾಲಿಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಸ್ವಾಗತಿಸಿದರು. ಜಿಪಂ ಸದಸ್ಯ ಹನುಮಂತಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಯಂಕಣ್ಣ ಯರಾಶಿ, ತಾಪಂ ಸದಸ್ಯೆ ಗೌರಮ್ಮ ನಾಗನೂರ, ಗ್ರಾಪಂ ಅಧ್ಯಕ್ಷೆ ಉಮಾದೇವಿ ಮಾಳೆಕೊಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ, ಧಾರವಾಡ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸಾಹಿತಿ ಡಾ.ಕೆ.ಬಿ.ಬ್ಯಾಳಿ, ವೀರಣ್ಣ ನಿಂಗೋಜಿ, ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೋಗೇರಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಸಂತೋಷ ದೇಶಪಾಂಡೆ, ಬಸವರೆಡ್ಡಿ ಆಡೂರ ಇತರರು ಇದ್ದರು.

ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ: ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಕನ್ನಡ ತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಷನೆ ನೆರವೇರಿಸುವ ಮೂಲಕ ಜಿಪಂ ಸದಸ್ಯ ಹನುಮಂತಗೌಡ ಮಾಲೀಪಾಟೀಲ್ ಚಾಲನೆ ನೀಡಿದರು. ಚಿಲಕಮುಖಿಯ ಶ್ರೀಶೈಲ ಮಲ್ಲಿಕಾರ್ಜುನ ಸಾಹಸಿ ಜಾನಪದ ಅಲೆಮಾರಿ ಕಲಾವಿದರ ಸಂಘ, ಕಲಾವಿದ ಶ್ರೀಯಮನೂರಪ್ಪ ಭಜಂತ್ರಿ, ಗೊರ್ಲೆಕೊಪ್ಪ ಶ್ರೀಕಂಠಿಬಸವೇಶ್ವರ ಜಾನಪದ ಕಲಾತಂಡ, ಚಿಕ್ಕೊಪ್ಪ ತಾಂಡಾದ ಶ್ರೀದುರ್ಗಾದೇವಿ ಲಂಬಾಣಿ ನೃತ್ಯ ತಂಡ, ಕೊನಾಪುರದ ಶ್ರೀಮಾರುತೇಶ್ವರ ಡೊಳ್ಳಿನ ಸಂಘ ಮತ್ತಿತರ ಕಲಾವಿದರು ಪಾಲ್ಗೊಂಡು ಶೋಭೆ ಹೆಚ್ಚಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಟಿ.ವಿ ಮಾಗಳದ, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಸಿ, ತಾಪಂ ಸದಸ್ಯ ಗೌರಮ್ಮ ನಾಗನೂರು, ಗ್ರಾಪಂ ಅಧ್ಯಕ್ಷೆ ಉಮಾದೇವಿ ಮಾಳೇಕೊಪ್ಪ, ಬಸವರಾಜ ಬೊಮ್ಮನಾಳ, ಬಸವರಾಜ ಮೇಟಿ, ಮಹೇಶ ಮೈನಳ್ಳಿ, ಪಿಡಿಒ ಶರಣಪ್ಪ ಕೆಳಗಿನಮನಿ, ನಾರಾಯಣ ದೊಡ್ಡಮನಿ, ಲಕ್ಷ್ಮಣ ಹಿರೇಮನಿ ಇತರರು ಇದ್ದರು.

ಕೃತಿ ಬಿಡುಗಡೆ: ಶರಣಪ್ಪ ಬಾಚಲಾಪುರ ಅವರ ‘ನನ್ನ ನಿಲುವು’ ಲೇಖನಗಳ ಸಂಕಲನ, ‘ನನ್ನ ಕಥೆಗಳು’ ಕಥಾಸಂಕಲನ , ರೂಪಾ ಘಟರೆಡ್ಡಿಹಾಳ ಲೇಖನಗಳ ಸಂಕಲನ ‘ಬಾಲ್ಯ ವಿವಾಹ’ , ಆಂಜನೇಯ ದೊಡ್ಡಮನಿ ಅವರ ಕವನ ಸಂಕಲನ ‘ಮೊದಲ ಹೆಜ್ಜೆ ’, ಶರಣಪ್ಪ ಆದಾಪೂರ ಅವರ ಕವನ ಸಂಕಲನ ‘ಹೊನಲ ಸಿರಿ’ ಕೃತಿಗಳು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಗುಳೆ ನಿಲ್ಲಲಿ ಎಂದ ಸರ್ವಾಧ್ಯಕ್ಷರು: ಕೃಷಿ ಪ್ರಧಾನವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಸಮೃದ್ಧಿ ನಡುವೆಯೂ ಬಡತನವಿದೆ. ಜನ ಕೆಲಸ, ಉದ್ಯೋಗ ಅರಸಿ ಇಂದಿಗೂ ಗುಳೆ ಹೋಗುವುದು ತಪ್ಪಿಲ್ಲ. ಇಲ್ಲಿನ ನೆಲ, ಜಲ ಬಳಸಿಕೊಂಡಿರುವ ಕಾರ್ಖಾನೆಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲವೆಂದು ಸಮ್ಮೇಳನದ ಸರ್ವಾಧ್ಯಕ್ಷ ಟಿ.ವಿ.ಮಾಗಳದ ಬೇಸರ ವ್ಯಕ್ತಪಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಅಸಮಾಧಾನ ಹೊರಹಾಕಿದ ಅವವರು, ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ.68ರಷ್ಟಿದೆ. ಮಳೆ ಬಂದರಷ್ಟೆ ಬೆಳೆ. 1977ರಲ್ಲಿ ಆರಂಭವಾದ ಹಿರೇಹಳ್ಳ ಯೋಜನೆ ಇಂದಿಗೂ ಪೂರ್ಣಗೊಂಡಿಲ್ಲ. 130 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ 30 ಟಿಎಂಸಿ ಹೂಳಿನಿಂದ ತುಂಬಿದೆ. ಈ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಬನ್ನಿಕೊಪ್ಪ ಗ್ರಾಮದವರಾದ ಆಶುಕವಿ ಪಂಡಿತ ಅಮರನಾಥ ಶಾಸ್ತ್ರಿಗಳು, ರಂಗಭೂಮಿಯ ಮೇರುನಟ ಯರಾಶಿ ಭರಮಪ್ಪ, ವಾಣಿಜ್ಯೋದ್ಯಮಿ ಬಿ.ವಿ.ಭೂಮರಡ್ಡಿ, ಮಹಾತ್ಮ ಗಾಂಧೀಜಿಯವರು ಭಾನಾಪುರಕ್ಕೆ ಬಂದಾಗ ಬಡರೈತರ ಕುರಿತು ಮನವಿ ಅರ್ಪಿಸಿದ ಬೇಳೂರು ತಿಮ್ಮನಗೌಡರು, ತಳಕಲ್ಲಿನ ಕಾಳಪ್ಪ ಪತ್ತಾರ, ಸ್ವಾತಂತ್ರ್ಯ ಯೋಧ ಶಂಕ್ರಪ್ಪ ಯರಾಶಿ, ಡಾ.ಕೆ.ಬಿ.ಬ್ಯಾಳಿ, ದಿ.ಎಲ್.ಎಂ.ಕನ್ನಾರಿ ಅವರ ಸಾಧನೆಗಳನ್ನು ಇದೆ ವೇಳೆ ಸ್ಮರಿಸಿದರು. ಇಂಥವರ ಪರಿಚಯ ಹಾಗೂ ಹಿರಿಮೆಯು ನಮ್ಮ ಶಾಲಾ-ಕಾಲೇಜು ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕೆಂದು ಒತ್ತಾಯಿಸಿದರು.

ಶೇಂಗಾ ಹೋಳಿಗೆ, ಮಾದಲಿ, ತುಪ್ಪದ ಊಟ: ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯ ಪ್ರೇಮಿಗಳು ಬಗೆ ಬಗೆ ಊಟ ಕಂಡು ಮನಸೋತರು. ಮಾದಲಿ, ತುಪ್ಪ, ಶೇಂಗಾ ಹೋಳಿಗೆ, ಚಪಾತಿ, ರೊಟ್ಟಿ, ಹೆಸರುಕಾಳು, ಬದನೆಕಾಯಿ ಪಲ್ಯ, ಅನ್ನ, ಸಾಂಬಾರ್, ಪುಡಿ, ಚಟ್ನಿ ಊಟ ಸವಿದರು. ಕಸಾಪ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಊಟ ಬಡಿಸಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅದನ್ನು ಉಳಿಸಿ ಬೆಳೆಸಬೇಕು. ಕೆಲಸ ಯಾವುದೇ ಇರಲಿ ಶ್ರದ್ಧೆ ಯಿಂದ ಮಾಡಬೇಕು. ಕೊಪ್ಪಳದಲ್ಲಿ ಎಲ್ಲಿ ನೋಡಿದರೂ ಕನ್ನಡ ಗುಂಗು ಹಿಡಿದಿದೆ. ಕನ್ನಡವನ್ನು ಗ್ರಾಮಕ್ಕೆ ಮುಟ್ಟಿಸಬೇಕು. ಆ ಕೆಲಸವನ್ನು ಕಸಾಪ ಮಾಡುತ್ತಿದೆ. ಕೊಪ್ಪಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ರನ್ನನ ಕಾವ್ಯದಲ್ಲಿ ಕೋಪಣಾಚಲದ ಉಲ್ಲೇಖವಿದೆ. ಬಾದಾಮಿ, ಲಕ್ಷ್ಮೀಶ್ವರ, ಒಕ್ಕುಂದ ಕೋಪಣಾಚಲ ಪ್ರದೇಶಗಳೇ ತಿರುಳ್ಗನ್ನಡ ನಾಡೆಂದು ಕವಿರಾಜ ಮಾರ್ಗದಲ್ಲಿ ಹೇಳಲಾಗಿದೆ.
| ಶಂಭು ಬಳಿಗಾರ ಜನಪದ ಸಾಹಿತಿ

Leave a Reply

Your email address will not be published. Required fields are marked *