ಕುಕನೂರು: ತಾಲೂಕಾದ್ಯಂತ ಗುರುವಾರ ತಡರಾತ್ರಿ ಗುಡುಗು, ಸಿಡಿಲು, ಗಾಳಿ ಸಮೇತ ಮಳೆ ಸುರಿದಿದ್ದು ಇಳೆ ತಂಪಾಗಿದೆ.
ಬಿರು ಬಿಸಿಲಿನಿಂದ ಕೆಂಡದಂತಾಗಿದ್ದ ಇಳೆ ಸ್ವಲ್ಪ ತಂಪಾಗಿದೆ. ಕೃಷಿ ಚಟುವಟಿಕೆಗಳತ್ತ ರೈತ ವರ್ಗ ಗಮನಹರಿಸುತ್ತಿದ್ದಾರೆ. ಮುಂಗಾರು ಪೂರ್ವ ಆಗಮನ ಮಳೆಯಿಂದ ಭೂಮಿ ಹಸಿ ಆಗಿದ್ದು, ಉಳುಮೆ, ಮಾಗಿ ಮಾಡಲು ರೈತರಿಗೆ ಅನುಕೂಲ ಆಗಿದೆ. ಬಿರು ಬಿಸಿಲಿನ ಝಳಕ್ಕೆ ಕಾವಾಡುತ್ತಿದ್ದ ಹಳ್ಳದ ಒಡಲು ಸಹ ನೀರಿನಿಂದ ತುಂಬಿ ಹರಿದಿವೆ. ಜಮೀನುಗಳ ಬದುವಿನಲ್ಲಿ ತೇವಾಂಶದ ಮೀರಿದ ನೀರು ಸಂಗ್ರಹವಾಗಿವೆ.
ತಾಲೂಕಿನ ಲಕಮಾಪೂರದಲ್ಲಿ ಸುಮಾರು ಎಂಟು ಎಕರೆ ಬಾಳೆ ಬೆಳೆ ರಾತ್ರಿ ಮಳೆಯ ಗಾಳಿಗೆ ನೆಲಕಚ್ಚಿದೆ. ಕಟಾವಿನ ಹಂತದಲ್ಲಿದ್ದ ಬಾಳೆ ಬೆಳೆ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. ಕಟಾವು ಹಂತದಲ್ಲಿದ್ದ ಗ್ರಾಮದ ಉಮೇಶ ನಗರದ ಅವರ 1.5 ಎಕರೆ, ನಿಂಗಪ್ಪ ಬನ್ನಿಕೊಪ್ಪ ಅವರ 1.10 ಎಕರೆ, ಹಮ್ಮಿಗೇಶ್ವರಯ್ಯ ಕಣವಿ ಅವರ 5 ಎಕರೆ ಬಾಳೆ ನೆಲಕಚ್ಚಿದೆ. ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ಅವರಿಗೆ ಮಳೆ ಬರೆ ಎಳೆದಿದೆ.