ಕುಕನೂರು: ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದರ ಜತೆಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಬಿಇಒ ಪದ್ಮನಾಭ ಕರ್ಣಂ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಶ್ರೀಗುರುಬಸವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶ್ರೀಸಿದ್ಧಲಿಂಗೇಶ್ವರ ಗ್ರಾಮೀಣ ವಿದ್ಯಾಸಂಸ್ಥೆ ಶನಿವಾರ ಆಯೋಜಿಸಿದ್ದ ಯಲಬುರ್ಗಾ- ಕುಕನೂರು ಅವಳಿ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇಟಗಿ ಗ್ರಾಮ ಚಾಲುಕ್ಯರ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಗ್ರಾಮದ ಜನರು ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡುವುದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ತಾಲೂಕು ಮಟ್ಟದ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎರಡೂ ತಾಲೂಕಿನ ವಿದ್ಯಾರ್ಥಿಗಳು ಬಂದಿದ್ದು, ಯಾರಿಗೂ ಅನ್ಯಾಯವಾಗದಂತೆ ಕ್ರೀಡಾ ಪ್ರತಿಭೆ ಗುರುತಿಸುವ ಜವಾಬ್ದಾರಿ ದೈಹಿಕ ಶಿಕ್ಷಣ ಶಿಕ್ಷಕರದ್ದಾಗಿದೆ. ಶಿಕ್ಷಣ ಇಲಾಖೆ ಅಗತ್ಯ ಸಹಕಾರ ನೀಡಲಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಕನೂರು ತಾಲೂಕು ಅಧ್ಯಕ್ಷ ಮಾರುತಿ ತಳವಾರ ಮಾತನಾಡಿ, ಅವಳಿ ತಾಲೂಕಿನ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿಯೂ ಸಾಧನೆ ಮಾಡಬೇಕು. ಕ್ರೀಡೆಯಿಂದ ನಾಯಕತ್ವ ಗುಣ ಬೆಳೆಯುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ನವೀನಕುಮಾರ ಗುಳ್ಳಗಣ್ಣನವರ ಅಧ್ಯಕ್ಷತೆ ವಹಿಸಿದರು. ಗ್ರಾಪಂ ಅಧ್ಯಕ್ಷ ಪ್ರಭುರಾಜ ಹಳ್ಳಿ ಕ್ರೀಡಾ ಜ್ಯೋತಿ ಬೆಳಗಿಸಿದರು. ಗ್ರಾಮೀಣ ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುತ್ತಯ್ಯ ಕಳ್ಳಿಮಠ ಉದ್ಘಾಟಿಸಿದರು. ಮಹೇಶ್ವರ ಪಪೂ ಕಾಲೇಜು ಕಾರ್ಯದರ್ಶಿ ಬಸವಪ್ರಭು ಸುಭಾಶ್ಚಂದ್ರ ಪಾಟೀಲ್ ಧ್ವಜ ವಂದನೆ ಸ್ವೀಕರಿಸಿದರು. ಗ್ರಾಪಂ ಉಪಾಧ್ಯಕ್ಷೆ ಬಸವರಾಜೇಶ್ವರಿ, ತಾಪಂ ಇಒ ರಾಮಣ್ಣ ದೊಡ್ಮನಿ, ದೈಹಿಕ ಶಿಕ್ಷಣ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ, ಬಿಆರ್‌ಸಿ ಅಶೋಕ ಗೌಡರ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಎಂ.ಹಳ್ಳಿ ಇತರರಿದ್ದರು.