ಅಧಿಕಾರಿಗಳ ನಿರ್ಲಕ್ಷೃಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಬೇಸರ

ಕುಕನೂರು: ತಾಲೂಕಿನ ನಾನಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬೀಗಡಾಯಿಸಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಅರಕೇರಿಯ ಹಿರೇಹಳ್ಳದ ಜಲಾಶಯಕ್ಕೆ ಬುಧವಾರ ಸಂಜೆ ಭೇಟಿ ನೀಡಿ, ಹಿರೇಹಳ್ಳದಿಂದ 20 ಗ್ರಾಮದ ಬಹು ಗ್ರಾಮ ಕುಡಿವ ನೀರಿನ ಪಂಪ್‌ಹೌಸ್ ಪರಿಶೀಲಿಸಿ, ನಂತರ ಮಾತನಾಡಿದರು. ತಾಲೂಕಿನ ಮಂಗಳೂರು ಗ್ರಾಮಕ್ಕೆ ಈ ಮೊದಲು ಹಿರೇಹಳ್ಳದಿಂದ 20 ಗ್ರಾಮಗಳ ಕುಡಿವ ಜಲ ಪೂರೈಸುವ ಯೋಜನೆಯಡಿ ನೀರು ಪೂರೈಕೆ ಆಗುತ್ತಿತ್ತು. ಸದ್ಯ ಪೂರೈಕೆ ಆಗುತ್ತಿಲ್ಲ. ಈ ಸಮಸ್ಯೆಗೆ ಪಂಪ್‌ಹೌಸ್ ಸ್ಥಗಿತಗೊಂಡಿದ್ದು ಕೂಡ ಕಾರಣವಾಗಿದೆ. ಹಿರೇಹಳ್ಳಕ್ಕೆ ಮಳೆ ಆದರೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತದೆ. ನೀರಿನ ಸದ್ಭಳಕೆಯಾಗಿ, ಅದು ಸ್ಥಳೀಯ ಜನತೆಗೆ ತಲುಪಬೇಕಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಿರೇಹಳ್ಳದಿಂದ ನೀರು ಪೂರೈಕೆ ಆಗುತ್ತಿಲ್ಲ. ಸ್ಥಗಿತಗೊಂಡಿರುವ ಕುಡಿವ ನೀರಿನ ಯೋಜನೆಗೆ ಕೂಡಲೇ ಕಾಯಕಲ್ಪ ಕಲ್ಪಿಸಿ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.