ಕುಕನೂರು: ಪಟ್ಟಣದ ಕಲ್ಲು ಗಣಿಗಾರಿಕೆ ಕ್ವಾರಿಗಳ ಸುತ್ತಮುತ್ತ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಭಾನುವಾರ ಬೋನಿಗೆ ಬಿದ್ದಿದೆ.
ಗಾವರಾಳ ಕಲ್ಲು ಗಣಿಗಾರಿಕೆ ಕ್ವಾರಿ ಬಳಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಇದರಿಂದ ಪಟ್ಟಣ ಹಾಗೂ ಸುತ್ತಲಿನ ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಗಿದೆ. ಕೆಲ ದಿನಗಳಿಂದ ಗಣಿಗಾರಿಕೆ ಕ್ವಾರಿಯ ಮಣ್ಣು, ಕಲ್ಲು ಬಂಡೆ ಮೇಲೆ ಚಿರತೆ ಪ್ರತ್ಯಕ್ಷವಾಗುತ್ತಿತ್ತು. ಇದನ್ನು ಜನರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಹೀಗಾಗಿ ಆ.14ರಂದು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಅಳವಡಿಸುವ ಮೂಲಕ ಕಾರ್ಯಾಚರಣೆಗೆ ಇಳಿದಿದ್ದರು. ಬೋನಿನಲ್ಲಿ ಪ್ರತಿದಿನ ರಾತ್ರಿ ನಾಯಿ, ಕುರಿ ಕಟ್ಟಿ ಹಾಕಿ ಚಿರತೆ ಸೆರೆಗೆ ಕಾರ್ಯ ರೂಪಿಸಿತ್ತು. ಸದ್ಯ ಚಿರತೆ ಬಲೆಗೆ ಬಿದ್ದಿದೆ. ಕಮಲಾಪುರದ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಲಾಗಿದೆ.