ಕುಕನೂರು: ಪಟ್ಟಣದ ಗುದ್ನೇಪ್ಪನಮಠದ ಅಂಗನವಾಡಿ ಶಾಲೆ, ದ್ಯಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಚಿವ ಹಾಲಪ್ಪ ಆಚಾರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ದೈಹಿಕ ಪರಿಪೂರ್ಣತೆಗೆ ಸರ್ಕಾರ ನೀಡುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂದ ಸಚಿವರು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ನಂತರ ಶಿಕ್ಷಕರೊಂದಿಗೆ ಶಾಲೆಯ ಕೊಠಡಿ, ಮೈದಾನ, ಮಕ್ಕಳ ಬಿಸಿಯೂಟದ ಕೊಠಡಿ ಕುರಿತು ಚರ್ಚಿಸಿದರು. ಹಾಜರಾತಿ ಪುಸ್ತಕ ಪರಿಶೀಲಿಸಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳು ಮತ್ತು ಗರ್ಭಣಿಯರ ಸಂಖ್ಯೆ ಹಾಗೂ ಅವರಿಗೆ ನೀಡುವ ಸೌಲಭ್ಯಗಳ ಕುರಿತು ಚರ್ಚಿಸಿದರು. ಅಪೌಷ್ಟಿಕ ನಿವಾರಣೆಗೆ ಅಂಗನವಾಡಿ ಮಟ್ಟದಲೇ ಸಾಧ್ಯವಿದ್ದು, ಸರ್ಕಾರ ನೀಡುವ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಯಲಬುರ್ಗಾ ಶಿಶು ಅಭಿವೃದ್ಧಿ ಅಧಿಕಾರಿ ಸಿಂಧು ಯಲಿಗಾರ, ಮುಖಂಡರಾದ ಕಳಕಪ್ಪ ಕಂಬಳಿ, ಬಸವನಗೌಡ ತೊಂಡಿಹಾಳ ಇತರರಿದ್ದರು.