ಸೇವಾ ಸ್ಥಳದಲ್ಲೇ ವಸತಿ ಇರಿ

ಕುಕನೂರು: ಅಧಿಕಾರಿಗಳು ತಾವು ನೌಕರಿ ಮಾಡುವ ಸ್ಥಳದಲ್ಲೇ ಮನೆ ಮಾಡಿ, ವಸತಿ ಇರಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು ಕಚೇರಿಗೆ ಸರಿಯಾದ ಸಮಯಕ್ಕೆ ಬಾರದಿರುವ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಅಲ್ಲದೇ, ಗ್ರಾಮಗಳ ಕಡೆ ಅಧಿಕಾರಿಗಳು ತಲೆ ಹಾಕುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮ್ಮ ಸೇವಾ ಸ್ಥಳಗಳ ಗ್ರಾಮಗಳಲ್ಲೇ ಇರುವುದರಿಂದ ಸಾರ್ವಜನಿಕರಿಗೆ ಲಭ್ಯವಾಗುವ ಜತೆಗೆ ಅವರ ಕಾರ್ಯಗಳಿಗೆ ಕೂಡಲೇ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಲೂಕಿನ ಗ್ರಾಮಗಳಲ್ಲಿರುವ ಸರ್ಕಾರಿ ಜಾಗೆ, ಶುದ್ಧ ಕುಡಿವ ನೀರಿನ ಘಟಕಗಳ ಸ್ಥಿತಿಗತಿ ಮತ್ತು ಸಮಸ್ಯೆ ಅದಕ್ಕಿರುವ ಪರಿಹಾರ, ಕುಡಿವ ನೀರಿನ ಮೂಲಗಳು ಅವುಗಳ ಸ್ಥಿತಿಗತಿ…ಹೀಗೆ ಹತ್ತಾರು ವಿಷಯಗಳ ಸಂಗ್ರಹ ಸ್ಥಳದಲ್ಲೇ ವಾಸವಾಗಿದ್ದಾಗ ತಿಳಿಯುತ್ತದೆ ಎಂದರು.

ಪ್ರಸ್ತಾವನೆ ಸಲ್ಲಿಸಿ: ತಾಲೂಕಿನಲ್ಲಿ ಬರವಿದ್ದು, ಗೋಶಾಲೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿರಿ. ಗ್ರಾಮೀಣ ಪ್ರದೇಶದ ಕೆರೆಗಳ ಮಾಹಿತಿ, ಕೆರೆಗಳ ವಿಸ್ತೀರ್ಣಗಳ ಕುರಿತು ಇನ್ನೂ 15 ದಿನಗಳ ಬಳಿಕ ನಡೆಯುವ ಮುಂದಿನ ಸಭೆಯೊಳಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನೂತನ ತಹಸಿಲ್ ಕಚೇರಿ ಸಂಕೀರ್ಣ ಬಗೆಗೆ ಗಮನ ಹರಿಸುವಂತೆ ತಹಸೀಲ್ದಾರ್ ರವಿರಾಜ ದಿಕ್ಷೀತ್‌ಗೆ ಸೂಚಿಸಿದರು.