ಕಳಪೆ ಕಾಮಗಾರಿಗೆ ಶಾಸಕ ಹಾಲಪ್ಪ ಆಚಾರ್ ಗರಂ

ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಪ್ರೌಢಶಾಲೆಯ ಪ್ರಾರಂಭೋತ್ಸವ

ಕುಕನೂರು: ಶಿರೂರು, ಮುತ್ತಾಳ, ವೀರಾಪುರ ಗ್ರಾಮಗಳ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿ ಅವೈಜ್ಞಾನಿಕ ಮತ್ತು ಕಳಪೆಯಾಗಿದ್ದು, ಅಧಿಕಾರಿಗಳಿಗೆ ಹೇಳೋರು, ಕೇಳೋರು ಇಲ್ಲದಂತಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ಆರೋಪಿಸಿದರು.

ಶಿರೂರಿನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಶ್ರೀಮತಿ ಬಸಮ್ಮ ಶಾಂತವೀರಗೌಡ ಪೋಲಿಸ್‌ಪಾಟೀಲ ಸರ್ಕಾರಿ ಪ್ರೌಢಶಾಲೆ ಪ್ರಾರಂಭೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಪುನರ್ವಸತಿಯ ಗ್ರಾಮದ ಅಭಿವೃದ್ಧಿಗೆ ಕೋಟ್ಯಂತರ ರೂ. ಬಂದಿತ್ತು. ಆದರೆ, ಕಾಮಗಾರಿ ಕಳಪೆಯಾಗಿದೆ. ಸದಾನಂದ ಗೌಡರು ಸಿಎಂ ಆಗಿದ್ದಾಗ ಶಿರೂರು ಪುನರ್ವಸತಿ ಗ್ರಾಮಕ್ಕೆ ರೂ 15 ಕೋಟಿ ರೂ. ಅನುದಾನ ಕೊಡಿಸಿದ್ದೆ. ಆದರೆ, ಹಿಂದಿನ ಶಾಸಕರ ನಿರ್ಲಕ್ಷ್ಯದಿಂದ ಕಾಮಗಾರಿ ಹಳ್ಳ ಹಿಡಿದವು. ವಿದ್ಯುತ್ ಸಂಪರ್ಕಕ್ಕೆ 6 ಕೋಟಿ ರೂ. ಬಿಡುಗಡೆಯಾಗಿ 6 ವರ್ಷ ಆದರೂ ಸರಿಯಾದ ವಿದ್ಯುತ್ ವ್ಯವಸ್ಥೆ ಆಗಿಲ್ಲ. ಸಿಸಿ ರಸ್ತೆ, ನೀರಿನ ಪೈಪ್‌ಲೈನ್ ಗುಣಮಟ್ಟದಿಂದ ಕೂಡಿಲ್ಲ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕರ ಜತೆ ಇತ್ತೀಚೆಗೆ ಚರ್ಚಿಸಿದ್ದೇನೆ. ಮೂಲ ಸೌಕರ‌್ಯಕ್ಕಾಗಿ ಅನುದಾನ ನೀಡಲು ಒಪ್ಪಿದ್ದಾರೆ ಎಂದರು.

ಕಾರ್ಯಕ್ರಮ ನಡೆದಾಗ ವಿದ್ಯುತ್ ಕಡಿತವಾಗಿದ್ದ ಬಿಇಒ ಶರಣಪ್ಪ ವಟಗಲ್ಲರನ್ನು, ಸ್ವಚ್ಛತೆ ಕಾಪಾಡದ್ದಕ್ಕೆ ಮುಖ್ಯ ಶಿಕ್ಷಕ, ಶಿಕ್ಷಕರನ್ನು ತರಾಟೆಗೆ ತೆಗೆದುಕೊಮಡ ಶಾಸಕರು, ಜಿಪಂ, ತಾಪಂ ಸದಸ್ಯರು ಬಿಡುವಿನ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅವಲೋಕನ ಮಾಡಬೇಕು. ಶಿಕ್ಷಕರು ನಿರ್ಲಕ್ಷ್ಯ ತೋರಿದ್ದು ಕಂಡು ಬಂದರೆ ಪ್ರಶ್ನಿಸಬೇಕು ಎಂದರು.

ಇಪ್ರೋ ಸಂಸ್ಥೆಯ ರಾಜ್ಯ ವ್ಯವಸ್ಥಾಪಕ ಸಿ.ಎಸ್ ಪಾಟೀಲ್ ಮಾತನಾಡಿದರು. ಬೆದವಟ್ಟಿ ಹಿರೇಮಠದ ಶಿವಸಂಗಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣವರ್, ತಾಪಂ ಅಧ್ಯಕ್ಷೆ ಲಕ್ಷ್ಮೀಗೌಡ್ರ, ಬಿಇಒ ಶರಣಪ್ಪ ವಟಗಲ್ಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಪ್.ಎಂ ಕಳ್ಳಿ, ಗ್ರಾಪಂ ಅಧ್ಯಕ್ಷೆ ಹನುಮವ್ವ ಮ್ಯಾಗಳಕೇರಿ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಹಳ್ಳಿಕೇರಿ, ಮುಖ್ಯ ಶಿಕ್ಷಕ ಗೋವಿಂದರಾವ್, ಲಕ್ಷ್ಮಣ ಹಿರೇಮನಿ, ಪ್ರಮುಖರಾದ ಶಿವಕುಮಾರ ನಾಗಲಾಪುರ, ಶಿವನಗೌಡ ಭಾನಪ್ಪಗೌಡ್ರ, ಸಿದ್ದನಗೌಡ ಮುತ್ತಾಳ, ಲಿಂಗನಗೌಡ ಇನಾಮತಿ, ಈಶಪ್ಪ ಮಳಗಿ, ಪಿಎಸ್‌ಐ ಜಿ.ಎಸ್ ರಾಘವೇಂದ್ರ, ದತ್ತನಗೌಡ ಇತರರು ಇದ್ದರು.

Leave a Reply

Your email address will not be published. Required fields are marked *