ಕುಕನೂರು: ರೈತರಿಗೆ ಮಾಹಿತಿ ಕೊರತೆಯಿಂದ ಸಹಕಾರಿ ಕ್ಷೇತ್ರದಲ್ಲಿ ಪ್ರಗತಿ ಕುಂಠಿತಗೊಂಡಿದೆ. ಹಾಗಾಗಿ ಫೆ.8ರಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸಹಕಾರಿ ಕ್ಷೇತ್ರದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗ ಮಟ್ಟದ ಸಹಕಾರಿ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೋಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಹಕಾರಿ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಎಲ್ಲರ ಸಹಕಾರ ಮುಖ್ಯ. ರೈತರಿಗೆ ಮಾಹಿತಿ ಕೊರತೆಯಿಂದಾಗಿ ಸಹಕಾರಿ ಕ್ಷೇತ್ರ ಪ್ರಗತಿ ಸಾಧಿಸಿಲ್ಲ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಸಹಕಾರಿ ಸಂಘದ ಸಮಾವೇಶ ಏರ್ಪಡಿಸಲಾಗುತ್ತಿದೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾರ್ಗದರ್ಶನದಲ್ಲಿ ಜಾಗೃತಿ ಬೃಹತ್ ಸಮಾವೇಶ ಏರ್ಪಡಿಸಲಾಗುತ್ತಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಸಹಕಾರಿ ಜಾಗೃತಿ ಸಮಾವೇಶದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಚಂದ್ರಶೇಖರಯ್ಯ ಹಿರೇಮಠ, ಶೇಖರಗೌಡ ಉಳ್ಳಾಗಡ್ಡಿ, ಸಮಿತಿ ಅಧ್ಯಕ್ಷ ರಾಘವೇಂದ್ರಚಾರ್ಯ ಜೋಶಿ, ಉಪನಿಬಂಧಕ ಪ್ರಕಾಶ ಸಜ್ಜನ, ಪ್ರಮುಖರಾದ ಭೀಮರಡ್ಡಿ ಶಾಡ್ಲಗೇರಿ, ಮಹೇಶ ಹಳ್ಳಿ ಇತರರಿದ್ದರು.
ಅಧಿಕಾರಿಗಳ ಸಭೆ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಸಹಕಾರಿ ಜಾಗೃತಿ ಸಮಾವೇಶ ಕುರಿತು ಅಧಿಕಾರಿಗಳು ಹಾಗೂ ಸ್ವಾಗತ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದರು. ಸಹಕಾರ ಕ್ಷೇತ್ರದ ಮಾಹಿತಿ ಪ್ರತಿಯೊಬ್ಬರಿಗೂ ತಲುಪುವಂತೆ ಸಮಾವೇಶದ ಮೂಲಕ ತಿಳಿಸಲು ಶಾಸಕ ರಾಯರೆಡ್ಡಿ ಸೂಚಿಸಿದರು.