ಶಾಸಕರ ಅಮಾನತು ಆದೇಶ ಹಿಂಪಡೆಯಲಿ

ಕುರುಗೋಡು: ಕಂಪ್ಲಿ ಶಾಸಕ ಜೆ.ಎನ್.ಗಣೇಶರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿರುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಪಟ್ಟಣದ ದಿ.ನಾಡಗೌಡರ ರಾಜಶೇಖರಗೌಡ ಸ್ಮಾರಕ ವೃತ್ತದಲ್ಲಿ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಮುಖಂಡ ಗೆಣಿಕೆಹಾಳ್ ಶ್ರೀಧರ ಗೌಡ ಮಾತನಾಡಿ, ಗಣೇಶ್ ವಿರುದ್ಧ ನೀಡಿರುವ ದೂರು ವಾಪಸ್ ಪಡೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ, ಶಾಸಕ ಆನಂದ್ ಸಿಂಗ್‌ರ ಮನವೊಲಿಸಬೇಕು. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ಶಾಸಕರು ಬಿಡುಗಡೆಯಾದರೆ ಅವರ ಗೆಲುವಿಗೆ ಅನುಕೂಲವಾಗಲಿದೆ. ನಿರ್ಲಕ್ಷೃವಹಿಸಿದರೆ, ಕಾಂಗ್ರೆಸ್‌ನ್ನು ಬೆಂಬಲಿಸುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡ ಯೋಹಾನ್ ಮಾತನಾಡಿ, ಶಾಸಕ ಗಣೇಶ ಇಲ್ಲದ ಕಾರಣ ಕ್ಷೇತ್ರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ನಾರಾ ಸೂರ್ಯನಾರಾಯಣ ರೆಡ್ಡಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ರಾಜ್ಯ ಸರ್ಕಾರ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿ, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ಮುಖಂಡರಾದ ಜಾನೆಕುಂಟೆ ಓಂಕಾರಪ್ಪ, ಬಂಗಿ ಮಲ್ಲಯ್ಯ, ಕಾಳಪ್ಪ, ಶೇಖಣ್ಣ, ಕೋಳೂರು ಬಸವ, ಬೈಲೂರು ಮಲ್ಲಪ್ಪ, ವೀರಾಂಜನೇಯುಲು ಇತರರಿದ್ದರು.