ಉಪ ವಿಭಾಗದ ಜೆಇ ಎಸಿಬಿ ಬಲೆಗೆ

ಕೂಡ್ಲಿಗಿ: ಪಟ್ಟಣದ ಜಿಪಂ ಇಂಜಿನಿಯರಿಂಗ್ ಉಪ ವಿಭಾಗದ ಜೆಇ ರೇವಣಸಿದ್ದಪ್ಪ ದೇವಸ್ಥಾನ, ಮಂಟಪ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಲಂಚ ಪಡೆಯುತ್ತಿದ್ದಾಗ ಶುಕ್ರವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಕೆ.ರಾಯಪುರದ ಗೊಲ್ಲರ ಭೀಮಯ್ಯ ಅವರ ಜಮೀನಿನಲ್ಲಿ ಮಲ್ಲಮ್ಮ ದೇವಿ ದೇವಸ್ಥಾನ, ಬನ್ನಿ ಮಂಟಪ ನಿರ್ಮಾಣಕ್ಕೆ ಜಿಲ್ಲಾಧಿಕಾರಿ, ಶಾಸಕರ ಅನುದಾನದಲ್ಲಿ 2.50 ಲಕ್ಷ ರೂ. ಮಂಜೂರು ಮಾಡಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳು ಉಪ ವಿಭಾಗದ ಕಚೇರಿಯಲ್ಲಿದ್ದವು. ಮೊದಲ ಹಂತವಾಗಿ 1.75 ಲಕ್ಷ ರೂ. ಬಿಡುಗಡೆಗೆ ರೇವಣಸಿದ್ದಪ್ಪ 13 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಕೂಲಿಕಾರ ಭೀಮಯ್ಯ ಬಳ್ಳಾರಿ ಎಸಿಬಿ ಕಚೇರಿಯಲ್ಲಿ ಗುರುವಾರ ದೂರು ದಾಖಲಿಸಿದ್ದರು. ಶುಕ್ರವಾರ ಗೊಲ್ಲರ ಭೀಮಯ್ಯ ಅವರಿಂದ ರೇವಣಸಿದ್ದಪ್ಪ 8 ಸಾವಿರ ರೂ. ಪಡೆಯುತ್ತಿದ್ದಾಗ ಸಿಪಿಐ ಶ್ರೀ ಧರ ದೊಡ್ಡಿ ನೇತೃತ್ವದ ತಂಡ ರೇವಣ ಸಿದ್ದಪ್ಪ ಅವರನ್ನು ಬಂಧಿಸಿದೆ. ಆರೋಪಿಯನ್ನು ಹೊಸಪೇಟೆ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಪಿಐ ತಿಳಿಸಿದ್ದಾರೆ. ಮುಖ್ಯ ಪೇದೆ ತಿಮ್ಮಾರೆಡ್ಡಿ, ಸತೀಶ, ವಸಂತ, ಪೇದೆ ದಿವಾಕರ, ಪ್ರಕಾಶ, ಯುವರಾಜ ಎಸಿಬಿ ತಂಡದಲ್ಲಿದ್ದರು.