ಮತ್ತೊಮ್ಮೆ ಮೋದಿ ಪ್ರಧಾನಿಯಾಗಲೆಂದು ಹರಕೆಹೊತ್ತು ಪಾದಯಾತ್ರೆ ಮಾಡಿದ ಯುವಕರು

ಕೂಡ್ಲಿಗಿಯಿಂದ ಕುಪ್ಪಿನಕೆರೆ ಆಂಜನೇಯ ದೇವಸ್ಥಾನಕ್ಕೆ ದೇವರ ನಾಮಜಪ, ವಿಶೇಷ ಪೂಜೆ

ಕೂಡ್ಲಿಗಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹರಕೆ ಹೊತ್ತ ಪಟ್ಟಣದ ಯುವ ಬ್ರಿಗೇಡ್ ಸಂಘಟನೆಯ ಯುವಕರು ಕೊಟ್ಟೂರಿನಿಂದ ಕುಪ್ಪಿನಕೆರೆ ಆಂಜನೇಯ ದೇವಸ್ಥಾನಕ್ಕೆ ಶನಿವಾರ ಪಾದಯಾತ್ರೆ ನಡೆಸಿದರು.

ಹನುಮ ನಾಮಜಪ, ರಾಮನಾಮಾವಳಿಗಳು ಹಾಗೂ ಭಜನೆ ಪದ ಹಾಡುತ್ತಾ ಪಾದಯಾತ್ರೆ ನಡೆಸಿ ಯುವಕರು ನಂತರ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬ್ರಿಗೇಡ್ ಸಂಚಾಲಕ ಕೆ.ಎಚ್.ಎಂ.ಸಚಿನ್ ಕುಮಾರ್ ಮಾತನಾಡಿ, ದೇಶದ ಭದ್ರತೆಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆ ಅಲಂಕರಿಸಬೇಕು. ಮೋದಿ ಐದು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸರ್ಕಾರ ನಡೆಸಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಯುವಕರ ಆಶಯ. ಆ ನಿಟ್ಟಿನಲ್ಲಿ ಕೊತ್ತಲ ಆಂಜನೇಯ ದೇವಸ್ಥಾನದಿಂದ ನೂರಾರು ಯುವಕರು ಐದು ಕಿಮೀ ದೂರದ ಕುಪ್ಪಿನಕೆರೆ ಆಂಜನೇಯ ದೇವಸ್ಥಾನದವರಗೆ ಪಾದಯಾತ್ರೆ ನಡೆಸಿದ್ದೇವೆ ಎಂದು ತಿಳಿಸಿದರು.

ಮುಖಂಡರಾದ ವಿವೇಕಾನಂದ, ಮಾಳಿಗೆ ಗುರುರಾಜ, ರಾಮು ಕಾಟ್ವ, ರಮೇಶ, ಉಮೇಶ, ಹಾಲೇಶ, ಶಿವು, ಮಣಿಕಂಠ, ಸತೀಶ, ಭರತ್, ಲಿಂಗರಾಜ್, ದಾಸರ ಮಂಜುನಾಥ, ಮಂಜುನಾಥ, ಸುರೇಶ, ಉಗ್ರೇಶ್ ಹಾಗೂ ನೂರಾರು ಯುವಕರು ಭಾಗವಹಿಸಿದ್ದರು.