ಸಮಗ್ರ ನೀರಾವರಿ ಯೋಜನೆ ಜಾರಿಗೆ ಪಟ್ಟು

24 ರಂದು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆ ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನ

ಕೂಡ್ಲಿಗಿ: ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಜೂ.24ರಂದು ಪಟ್ಟಣ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಮಾಡಿ ಸರ್ಕಾರದ ಮೇಲೆ ಒತ್ತಡ ತರಲು ಪಟ್ಟಣದ ಬಡ ವಿದ್ಯಾರ್ಥಿ ಪ್ರಸಾದ ನಿಲಯದಲ್ಲಿ ಶನಿವಾರ ಜರುಗಿದ ತಾಲೂಕಿನ ಸಮಗ್ರ ಹೋರಾಟ ಸಮಿತಿ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ ಮಾತನಾಡಿ, ಕಳೆದ 15 ವರ್ಷಗಳಿಂದ ತಾಲೂಕಿಗೆ ಸಮಗ್ರ ನೀರಾವರಿ ಜಾರಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದು, ಈವರೆಗೂ ಪ್ರತಿಫಲ ಸಿಕ್ಕಿಲ್ಲ. ಜನಪ್ರತಿನಿಧಿಗಳು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಗುರುಸಿದ್ದನಗೌಡ ಮಾತನಾಡಿ, ಈಗಾಗಲೆ ಭದ್ರಾ ಮೇಲ್ಡಂಡೆ ಯೋಜನೆ ಜಾರಿ ಮಾಡಲು ನ್ಯಾಯಾಲಯದಲ್ಲಿ 2 ರಿಟ್ ಅರ್ಜಿ ಹಾಕಿದ್ದು, ಯಾವುದೇ ಕಾರ್ಯ ಆಗಿಲ್ಲ. ತಾಲೂಕಿಗೆ ಭದ್ರಾ ಮೇಲ್ಡಂಡೆ ಯೋಜನೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಲಭ್ಯತೆ ಇಲ್ಲ ಎಂದು ತಿಳಿದಿದ್ದು, ಸರ್ಕಾರ ಪರ್ಯಾಯವಾಗಿ ಹರಪನಹಳ್ಳಿ ಬಳಿಯ ಗರ್ಭಗುಡಿ ಯೋಜನೆಯಿಂದಾದರೂ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಇದಕ್ಕೆ ಸ್ಥಳೀಯ ಶಾಸಕರು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸಿದಲ್ಲಿ ಮಾತ್ರ ಸಾಧ್ಯವಾಗಲಿದೆ ಎಂದು ಹೇಳಿದರು.

ಕಾನಾಮಡುಗು ದಾಸೋಹಮಠದ ಶರಣಾರ್ಯರು ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯಕ್ಷ ಪಿ.ರಜನಿಕಾಂತ, ಹೋರಾಟ ಸಮಿತಿಯ ಎಂ.ಬಸವರಾಜ, ವಕೀಲ ಡಿ.ಎಚ್.ದುರುಗೇಶ, ಸಾಲುಮನಿ ರಾಘವೇಂದ್ರ, ಟಿ.ಜಿ.ಮಲ್ಲಿಕಾರ್ಜುನಗೌಡ, ಕೆ.ಎಚ್.ಎಂ.ಸಚಿನ್, ಮಾಳಗಿ ಗುರುರಾಜ, ಕೆ.ಜಿ.ಬಸವರಾಜ, ರೈತ ಸಂಘದ ವಿ.ನಾಗರಾಜ ಇತರರಿದ್ದರು.

ತಾಲೂಕಿನ ಎಲ್ಲ ರೈತರು ಹಾಗೂ ಗ್ರಾಪಂ, ತಾಪಂ, ಜಿಪಂ ಸದಸ್ಯರು, ಸಂಘ, ಸಂಸ್ಥೆಗಳು ಹೋರಾಟದಲ್ಲಿ ಭಾಗವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಬೇಕು. ಯೋಜನೆ ಜಾರಿಯಾಗುವ ವರೆಗೆ ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ.
| ಗುನ್ನಳ್ಳಿ ರಾಘವೇಂದ್ರ ಅಧ್ಯಕ್ಷ, ಕನ್ನಡ ಸೇನೆ ಕರ್ನಾಟಕ ಸಂಘ

Leave a Reply

Your email address will not be published. Required fields are marked *