ರೈತನ ಮೇಲೆ ಎರಗಿದ ಕರಡಿ

ಮುಖ, ಕೈಗೆ ಗಾಯ ಗುಡ್ಡದ ಬಳಿ ಬೋನು ಅಳವಡಿಕೆ

ಕೂಡ್ಲಿಗಿ: ತಾಲೂಕಿನ ಕೈವಲ್ಯಾಪುರದ ರೈತ ಉಪ್ಪಾರ ದುರುಗಪ್ಪ ಮೇಲೆ ಬುಧವಾರ ಬೆಳಗ್ಗೆ ಕರಡಿ ದಾಳಿ ನಡೆಸಿ ಮುಖ, ಕೈಗೆ ತೀವ್ರವಾಗಿ ಗಾಯಗೊಳಿಸಿದೆ.

ಎಂದಿನಂತೆ ದುರುಗಪ್ಪ ಎಲೆ ತೋಟಕ್ಕೆ ನೀರು ಹಾಯಿಸಲು ತೆರಳಿದಾಗ ಕರಡಿ ದಾಳಿ ಮಾಡಿದೆ. ದುರುಗಪ್ಪ ಚೀರಾಡುತ್ತಿದ್ದಂತೆ ಸುತ್ತಲಿನ ಜಮೀನುಗಳಲ್ಲಿದ್ದ ರೈತರು ಗದ್ದಲ ಮಾಡಿದ್ದರಿಂದ ಕರಡಿ ಓಡಿ ಹೋಗಿದೆ. ಗಾಯಾಳುಗೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‌ಗೆ ಕಳುಹಿಸಲಾಗಿದೆ.

ಕೂಡ್ಲಿಗಿ ಆರಣ್ಯ ಸಂರಕ್ಷಣಾ ಅಧಿಕಾರಿ ತಿಪ್ಪೇಸ್ವಾಮಿ, ವಲಯ ಅರಣ್ಯ ಅಧಿಕಾರಿ ರೇಣುಕಮ್ಮ, ಸಿಬ್ಬಂದಿ ತೋಟದಲ್ಲಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ಕರಡಿ ಅಡಗಿರಬಹುದಾದ ಕೆರೆ ಪಕ್ಕದ ಗುಡ್ಡದಲ್ಲಿ ಬೋನು ಅಳವಡಿಸಲಾಯಿತು.

ಕರಡಿ ಸೆರೆಗೆ ಒತ್ತಾಯ
ಇದೇ ಪ್ರದೇಶದಲ್ಲಿ ಎರಡು ತಿಂಗಳಲ್ಲಿ ಮೂವರು ರೈತರ ಮೇಲೆ ಕರಡಿ ದಾಳಿ ಮಾಡಿದೆ. ಕೂಡಲೆ ಕರಡಿ ಸೆರೆ ಹಿಡಿದು ರೈತರನ್ನು ರಕ್ಷಿಸಬೇಕು ಎಂದು ಕೈವಲ್ಯಾಪುರ, ಹಿರೇಹೆಗ್ಡಾಳ್ ಗ್ರಾಮದ ಜನರು ಒತ್ತಾಯಿಸಿದ್ದಾರೆ.