ದಾಖಲೆಗಳಿಲ್ಲದೆ ಬದುಕು ಅತಂತ್ರ!

ನಿತ್ಯ ಕಚೇರಿಗೆ ಅಲೆದಾಟ ಬಡ ಕೂಲಿಕಾರ್ಮಿಕರ ಗೋಳು ಕೇಳುವರ‌್ಯಾರು?

ತಾಲೂಕಿನ ಬೊಪ್ಪಲಾಪುರದ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿರುವ 44 ಕ್ಕೂ ಹೆಚ್ಚು ಕುಟುಂಬಗಳು ನಿವೇಶನ ಪತ್ರಕ್ಕೆ ಬರೋಬ್ಬರಿ 25 ವರ್ಷಗಳಿಂದ ಅಲೆದಾಡುತ್ತಿವೆ. ಹಿರೇಹೆಗ್ಡಾಳ್ ಗ್ರಾಪಂ ವ್ಯಾಪ್ತಿಯ ಬೊಪ್ಪಲಾಪುರದ 1.67 ಎಕರೆ (ಸರ್ವೇ ನಂಬರ್ 366ಎ) ಜಮೀನಿನ ಪಹಣಿಯಲ್ಲಿ ಆಶ್ರಯ ನಿವೇಶನಕ್ಕೆ ಎಂದು ನಮೂದಾಗಿದೆ. 1.71 ಎಕರೆ (ಸರ್ವೇ ನಂಬರ್ 366ಬಿ) ಜಮೀನಿನ ಪಹಣಿಯಲ್ಲಿ ಸರ್ಕಾರಿ ಅನಾಧೀನ ಎಂದು ನಮೂದಾಗಿದೆ. ಎರಡು ಸರ್ವೇ ನಂಬರ್‌ಗಳ ಜಮೀನುಗಳಲ್ಲಿ ಬಡವರು, ಕೂಲಿ ಕಾರ್ಮಿಕರು ದಿನದೂಡುತ್ತಿದ್ದಾರೆ. ಆಶ್ರಯ ನಿವೇಶನಕ್ಕೆ ಎಂದು ನಮೂದಾಗಿರುವ ಜಮೀನಿನಲ್ಲಿ ಐದಾರು ಕುಟುಂಬಗಳು ಮನೆ ನಿರ್ಮಿಸಿಕೊಂಡಿವೆ. ಬಾಕಿ ಕುಟುಂಬಗಳು ಸರ್ಕಾರ ಅನಾಧೀನ ಎಂದು ಗುರುತಿಸಿದ ಜಾಗದಲ್ಲಿ ಟಿನ್ ಶೆಡ್, ಗುಡಿಸಲುಗಳಲ್ಲಿವೆ. ಹೇಳಲಿಕ್ಕೆ ಮನೆಗಳಿದ್ದರೂ, ಸರ್ಕಾರದಿಂದ ನಿವೇಶನ ಪತ್ರ, ಮನೆ ಬಾಗಿಲು ಸಂಖ್ಯೆ ನೀಡದೆ ಇರುವುದರಿಂದ ಬಿಪಿಎಲ್ ಕಾರ್ಡ್, ಸರ್ಕಾರದ ಯೋಜನೆಗಳು ಸೇರಿ ಮೂಲ ಸೌಕರ್ಯಗಳು ಮರಿಚೀಕೆಯಾಗಿವೆ.

ಪಹಣಿ ಇತರೆ ದಾಖಲೆಗಳನ್ನು ಹಿಡಿದು ನಿತ್ಯ ತಹಸಿಲ್, ತಾಪಂ ಕಚೇರಿಗೆ ಅಲೆದಾಡಿದರೂ ಅಧಿಕಾರಿಗಳು ನಮ್ಮ ಮನವಿಯನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಕೆಲವು ನಿವೇಶನಗಳು ಕಂದಾಯ ಇಲಾಖೆಗೆ, ಕೆಲವು ತಾಪಂ ಇಒ ವ್ಯಾಪ್ತಿಗೆ ಬರಲಿವೆ. ಅಧಿಕಾರಿಗಳ ಇಚ್ಛಾಶಕ್ತಿಯ ಮುಂದೆ ನಮ್ಮ ಸಮಸ್ಯೆ ದೊಡ್ಡದಲ್ಲ. 25 ವರ್ಷಗಳಿಂದ ಸಾಗಿರುವ ಅತಂತ್ರ ಬದುಕಿಗೆ ಭದ್ರತೆ ಸಿಗಲಿದೆ. ಈಗಿನವರ ಜತೆಗೆ ಮುಂದಿನ ಪೀಳಿಗೆಗೂ ಅನುಕೂಲವಾಗಲಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಬೊಪ್ಪಲಾಪುರದ ವಸಂತ, ರತ್ನಮ್ಮ, ಹನುಮವ್ವ, ಇಂದ್ರಮ್ಮ, ಕೊಟ್ರಮ್ಮ, ಜ್ಯೋತಿ ಸೇರಿ ಇತರರು ಒತ್ತಾಯಿಸಿದ್ದಾರೆ.

ಪಟ್ಟಾ ಸೇರಿ ವಿವಿಧ ಸೌಕರ್ಯಕ್ಕೆ ಅರ್ಜಿ ಸಲ್ಲಿಸಲು ಗ್ರಾಪಂ ಸಿಬ್ಬಂದಿ ಮಾರ್ಗದರ್ಶನ ನೀಡುವುದಿಲ್ಲ. 25 ವರ್ಷಗಳಿಂದ ವಾಸಿಸುತ್ತಿದ್ದರೂ ನಿಯಮ ಅನುಸಾರ ಪಟ್ಟಾ ನೀಡಿಲ್ಲ. ಚುನಾವಣೆಗೆ ಮಾತ್ರ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಾವು ನೆನಪಾಗುತ್ತೇವೆ. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಗೆದ್ದ ಬಳಿಕ ಅವರು ಹಿಂದಿರುಗಿ ನೋಡುವುದಿಲ್ಲ. ನಮ್ಮ ಸಮಸ್ಯೆ ಯಾರ ಹತ್ತಿರ ಹೇಳಿಕೊಳ್ಳಬೇಕೋ ತಿಳಿಯುತ್ತಿಲ್ಲ.
| ಟಿ.ಜ್ಯೋತಿ ಬೊಪ್ಪಲಾಪುರ ನಿವಾಸಿ

ಬೊಪ್ಪಲಾಪುರ ಗ್ರಾಮಸ್ಥರ ನಿವೇಶನ ಸಮಸ್ಯೆ ಗಮನಕ್ಕೆ ಬಂದಿದೆ. ಐದಾರು ಕುಟುಂಬಗಳು ಆಶ್ರಯ ನಿವೇಶನಕ್ಕೆ ಗುರುತಿಸಿದ ಜಾಗದಲ್ಲಿ ವಾಸಿಸುತ್ತಿವೆ. ಸರ್ಕಾರಿ ಅನಾಧೀನ ಜಾಗದಲ್ಲಿ ಬದುಕು ಕಟ್ಟಿಕೊಂಡಿರುವ 35 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ವ್ಯಾಪ್ತಿಯ ನಾಡಕಚೇರಿಗೆ 94ಸಿ ಫಾರಂನಲ್ಲಿ ಪಟ್ಟಾಕ್ಕೆ ಅರ್ಜಿ ಸಲ್ಲಿಸಲು ಮಾ. 31ರವರೆಗೆ ಅವಕಾಶವಿದೆ. ಚುನಾವಣೆ ನಂತರ ಸರ್ಕಾರಿ ನಿಯಮಗಳ ಅನುಸಾರ ಅವರಿಗೆ ಪಟ್ಟಾ ವಿತರಿಸಲಾಗುವುದು.
| ಮಹಾಬಲೇಶ್ವರ
ತಹಸೀಲ್ದಾರ್‌ರು, ಕೂಡ್ಲಿಗಿ

ಹಲವು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿರುವ ತಮಗೆ ನ್ಯಾಯ ಒದಗಿಸುವಂತೆ ಇಲ್ಲಿನ ನಿವಾಸಿಗಳು ಮಾ.7 ರಂದು ಬಳ್ಳಾರಿ ಡಿಸಿ ಕಚೇರಿಯಲ್ಲಿ ಎಡಿಸಿಗೆ ಮನವಿ ಸಲ್ಲಿಸಿದ್ದಾರೆ. ನ್ಯಾಯಯುತ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುವುದಾಗಿ ಭರವಸೆ ನೀಡಿದ ಎಡಿಸಿ ದೂರವಾಣಿ ಮೂಲಕ ನಿವೇಶನ ಸಮಸ್ಯೆ ಪರಿಹರಿಸುವಂತೆ ಕೂಡ್ಲಿಗಿ ತಹಸೀಲ್ದಾರ್‌ಗೆ ಸೂಚಿಸಿದರು. ಆದರೆ, ಇದೂವರೆಗೂ ಕೂಡ್ಲಿಗಿ ತಹಸೀಲ್ದಾರ್ ಈ ಬಗ್ಗೆ ಗಮನಹರಿಸಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದರು.

| ವೀರೇಶ್ ಅಂಗಡಿ, ಕೂಡ್ಲಿಗಿ