ಕೈ ಕೊಟ್ಟ ಕಂಪನಿಗಳು

 ಕೋರ್ಟ್ ಮೊರೆ ಹೋಗಲು ನಿರ್ಧಾರ>

ಕೂಡ್ಲಿಗಿ (ಬಳ್ಳಾರಿ): ಹೆಚ್ಚು ಲಾಭ ಬರುತ್ತದೆಂದು ಲಕ್ಷಾಂತರ ರೂ. ಹೂಡಿಕೆ ಮಾಡಿ ಕೈಸುಟ್ಟುಕೊಂಡ ಪಟ್ಟಣದ ಸಂತ್ರಸ್ತರು ಈಗ ಮಧ್ಯವರ್ತಿಗಳ ವಿರುದ್ಧ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಈ ಸಂಬಂಧ ಶನಿವಾರ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತರು, ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ ಮೂಲದ ಹೀರಾ ಗೊಲ್ಡ್ ಲಿಮಿಟೆಡ್, ಇಜಾಜ್ ಇಂಟರ್ ನ್ಯಾಷನಲ್ ಕಂಪನಿ, ಅಜ್ಮೀರಾ ಗ್ರೂಫ್ಸ್ ಹಾಗೂ ಆಲಾ ವೆಂಚರ್ಸ್ ಲಿಮಿಟೆಡ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದೇವೆ ಎಂದು ಅಳಲು ವ್ಯಕ್ತಪಡಿಸಿದರು.

ಸ್ಥಳೀಯರ ಮಾತು ನಂಬಿ ನಮ್ಮಲ್ಲಿದ್ದ ಹಣವನ್ನೆಲ್ಲ ಹೂಡಿಕೆ ಮಾಡಿದೆವು. ಆರಂಭದಲ್ಲೇನೋ ಸ್ವಲ್ಪ ಹಣ ಬಂದಿತ್ತು. ನಂತರ ಹೂಡಿಕೆ ಮಾಡಿದ ಕಂಪನಿಗಳಿಂದ ನಮಗೆ ಮೋಸವಾಗಿದೆ ಎಂದು ತಿಳಿಯಿತು. ಈ ಬಗ್ಗೆ ಸ್ಥಳೀಯ ಮಧ್ಯವರ್ತಿಗಳನ್ನು ವಿಚಾರಿಸಿದರೆ ನಾವೂ ಮೋಸ ಹೋಗಿದ್ದೇವೆ ಎಂಬುದಾಗಿ ಹೇಳುತ್ತಿದ್ದಾರೆ ಎಂದರು.

ಮೂರು ಲಕ್ಷ ರೂ. ಹೂಡಿಕೆ ಮಾಡಿರುವ ಸೈಯದ್ ಷಫೀವುಲ್ಲಾ ಮಾತನಾಡಿ, ಆ್ಯಂಬಿಡೆಂಟ್ ಕಂಪನಿ ಪರ ಪಟ್ಟಣದ ಯೂಸಫ್ ಎಂಬುವರು ಸ್ಥಳೀಯವಾಗಿ ಮಧ್ಯವರ್ತಿಯಾಗಿದ್ದು, ನಮ್ಮಿಂದ ಹಣ ಪಡೆದು ಹಲವು ಬ್ಯಾಂಕ್‌ಗಳಿಂದ ಕಂಪನಿಗೆ ರವಾನೆ ಮಾಡಿದ್ದಾರೆ. ಕೆಲವೊಮ್ಮೆ ಸ್ವತಃ ತಾನೇ ಹೋಗಿ ಕಂಪನಿ ಮಾಲೀಕ ಫರೀದ್‌ಗೆ ಹಣ ನೀಡಿ ಬಂದಿದ್ದಾನೆ. ಈ ಬಗ್ಗೆ ಯೂಸುಫ್‌ಗೆ ವಿಚಾರಿಸಿದರೆ ‘ನಿಮ್ಮ ಹಣ ಇಂದು ಬರುತ್ತೆ.. ನಾಳೆ ಬರುತ್ತದೆ..’ ಎಂದು ಹಾರಿಕೆ ಉತ್ತರ ನೀಡುತ್ತಿದ್ದು, ಹಣಕ್ಕೆ ಯಾವುದೇ ಗ್ಯಾರಂಟಿ ನೀಡುತ್ತಿಲ್ಲ ಎಂದರು.

ವೃದ್ಧೆ ಹೊನ್ನೂರಬೀ ಮಾತನಾಡಿ, ಬೀಡಿ ಕಟ್ಟುತ್ತ ಮನೆ ನಿರ್ಮಿಸಿಕೊಳ್ಳಲು ಕೂಡಿಟ್ಟಿದ್ದ ಸುಮಾರು ಆರು ಲಕ್ಷ ರೂ.ಯನ್ನು ಇವರಿಗೆ ನೀಡಿದ್ದೇನೆ. ಆದರೆ, ಈಗ ಇತ್ತ ಹಣವೂ ಇಲ್ಲ, ಅತ್ತ ಮನೆಯೂ ಇಲ್ಲ ಎಂಬಂತಾಗಿದೆ. ಇನ್ನೂ ನಮಗೆ ದೇವರ ಗತಿ ಎಂದು ದುಃಖ ವ್ಯಕ್ತಪಡಿಸಿದರು.

ಯೂನಸ್ ಖಾನ್ ಮಾತನಾಡಿ, ಒಂದು ಸೈಟ್ ಹಾಗೂ ಹೆಂಡತಿಯ ಬಂಗಾರ ಮಾರಿ ಆಂಬಿಡೆಂಟ್‌ನಲ್ಲಿ ದುಡ್ಡು ಹಾಕಿದ್ದೆ. ಎರಡು ಕಂತುಗಳಲ್ಲಿ ಹಣ ಬಂದಿದ್ದು, ಇನ್ನೂ ಸುಮಾರು ಆರು ಲಕ್ಷ ರೂ. ಬರಬೇಕಾಗಿದೆ. ಈಗ ಎಲ್ಲವನ್ನು ಕಳೆದುಕೊಂಡು ಹಬ್ಬ ಮಾಡಲು ದುಡ್ಡಿಲ್ಲದೆ ಹೆಂಡತಿ-ಮಕ್ಕಳನ್ನು ತವರಿಗೆ ಕಳಿಸಿ, ಮನೆಯಲ್ಲಿ ಒಬ್ಬನೆ ಇದ್ದೇನೆ ಎಂದರು.

19 ಕೋಟಿ ರೂ. ಹೂಡಿಕೆ: ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಎಲ್.ಎಸ್. ಬಷೀರ್ ಆಹಮದ್, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಗೃಹಿಣಿಯರು ಸೇರಿ ಕೂಡ್ಲಿಗಿಯೊಂದರಲ್ಲೇ 200ಕ್ಕೂ ಹೆಚ್ಚು ಜನ ಆಂಬಿಡೆಂಟ್ ಸೇರಿ ನಾನಾ ಕಂಪನಿಗಳಲ್ಲಿ 19 ಕೋಟಿ ರೂ. ಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ. ಆದರೆ, ಕಂಪನಿಗಳು ಮೋಸ ಮಾಡಿವೆ. ಸುಳ್ಳು ಹೇಳಿ ಹಣ ಕಟ್ಟಿಸಿಕೊಂಡ ಸ್ಥಳೀಯ ಮಧ್ಯವರ್ತಿಗಳ ವಿರುದ್ಧ ದೂರು ದಾಖಲು ಮಾಡಲಾಗುವುದು. ಕೋರ್ಟಿನಲ್ಲೂ ದಾವೆ ಹೂಡಲಾಗುವುದು ಎಂದರು.