ಕೂಡಲಸಂಗಮಕ್ಕೆ ಭಕ್ತರ ದಂಡು

ಕೂಡಲಸಂಗಮ: ಕೃಷ್ಣೆ ಮತ್ತು ಮಲಪ್ರಭೆ ಸಂಗಮ ಸ್ಥಳವಾದ ಕೂಡಲಸಂಗ ಮದಲ್ಲಿ ಅಪಾರ ಭಕ್ತರು ನದಿಯಲ್ಲಿ ಸ್ನಾನ ಮಾಡಿ ಶ್ರಾವಣ ಮೂರನೇ ಸೋಮವಾರವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಶನಿವಾರ ರಾತ್ರಿಯೇ ಸುಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಭಾನುವಾರ ನೂಲು ಹುಣ್ಣಿಮೆ ಅಂಗವಾಗಿ ನದಿಯಲ್ಲಿ ಸ್ನಾನಮಾಡಿ ಕ್ಷೇತ್ರಾಧಿಪತಿ ಸಂಗಮನಾಥ ಹಾಗೂ ಬಸವಣ್ಣನವರ ಐಕ್ಯ ಮಂಟಪದ ದರ್ಶನ ಪಡೆದರು. ನಂತರ ಐಹೊಳೆ, ಪಟ್ಟದಕಲ್ಲು, ಮಹಾಕೂಟ, ಶಿವಯೋಗ ಮಂದಿರ, ಬಾದಾಮಿ, ಆಲಮಟ್ಟಿ, ಯಲಗೂರ ಹಾಗೂ ವಿಜಯಪುರ ವೀಕ್ಷಿಸಿದರು. ಸೋಮವಾರ ನದಿಯಲ್ಲಿ ಮಿಂದು ವಿವಿಧ ಧಾರ್ವಿುಕ ಕಾರ್ಯಗಳಲ್ಲಿ ಭಾಗವಹಿಸಿ, ದೋಣಿ ವಿಹಾರ ಮಾಡಿದರು.

ಶ್ರಾವಣದ ಮೂರನೇ ಸೋಮವಾರ ಸುಕ್ಷೇತ್ರಕ್ಕೆ 30 ಸಾವಿರಕ್ಕೂ ಅಧಿಕ ಭಕ್ತರು ಬಂದಿದ್ದಾರೆ. ಇದರಲ್ಲಿ 3 ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದರು. ಸಂಗಮನಾಥನಿಗೆ 369 ಪಂಚಾಮೃತ, 441 ರುದ್ರಾಭಿಷೇಕ, 10 ದೀಡ್ ನಮಸ್ಕಾರಗಳು, 5 ಜವಳದ ಕಾರ್ಯಗಳು ನಡೆದವು. ಮಧಾಹ್ನದ ವೇಳೆಗೆ ಭಕ್ತರು 17.514ರೂ. ದಾಸೋಹ ದೇಣಿಗೆ, 3.778 ಕಲಸಕ್ಕೆ ಬಂಗಾರದ ಲೇಪಣ ಕಾಣಿಕೆ ನೀಡಿದ್ದಾರೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ತಹಸೀಲ್ದಾರ್ ಆರ್.ಎಸ್. ಹಿರೇಮಠ ತಿಳಿಸಿದ್ದಾರೆ.