ಹರನಿಗೆ ಗೌರವ ದೇವನಿಗೆ ಪೂಜೆ

ಕೂಡಲಸಂಗಮ: ಶಿವ ಬೇರೆ, ದೇವ ಬೇರೆ, ಶಿವನು ಗಂಗೆ ಗೌರಿ ವಲ್ಲಭ, ಕೈಲಾಸಾಧಿಪತಿ. ಆದರೆ ದೇವರು ನಿರಾಕಾರ, ನಿರ್ಗಣನಾದವನು. ಅವನು ಪಶು ಪಕ್ಷಿ ಆಕಾರದವನಲ್ಲ, ನಾವು ಹರನನ್ನು ಗೌರವಿಸುತ್ತೇವೆ, ಪೂಜಿಸುವುದು ಮಾತ್ರ ದೇವನನ್ನು ಎಂದು ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದರು.

ಕೂಡಲಸಂಗಮದಲ್ಲಿ ನಡೆದ 32ನೇ ಶರಣಮೇಳದ ನಾಲ್ಕನೇ ದಿನ ಸೋಮವಾರ ರಾತ್ರಿ ನಡೆದ ಸಾಮೂಹಿಕ ಇಷ್ಟಲಿಂಗಾರ್ಚನೆ ಹಾಗೂ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಯೋಗಿ ಶಿವನ ಕೊಡುಗೆ ಇದೆ. ಅಷ್ಟಾವರಣಗಳಲ್ಲಿ ವಿಭೂತಿ, ರುದ್ರಾಕ್ಷಿ, ಮಂತ್ರ ಶಿವನಿಂದ ಬಂದಿವೆ. ಇನ್ನೂ ಐದನ್ನು ಬಸವಣ್ಣನವರೇ ಕೊಟ್ಟಿದ್ದಾರೆ. ಕೆಲವು ಧರ್ಮಗಳ ಗುರುಗಳು ಶಿಷ್ಯರನ್ನು ಹುಡುಕಿಕೊಂಡು ಹೋಗುವ ಕಾಲ ಇತ್ತು. ಆದರೆ ಬಸವಣ್ಣನವರ ಕಾಲದಲ್ಲಿ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ಬೇರೆ ಬೇರೆ ಕಡೆಯಿಂದ ಶಿಷ್ಯರೇ ಹರಿದು ಬಂದರು ಎಂದು ಹೇಳಿದರು.

ಮಾನವೀಯತೆ ಕುರಿತು ಎಲ್ಲರಿಗೂ ತಿಳಿಸಲು ಬಸವಣ್ಣನವರು ಜಂಗಮರನ್ನು ತಯಾರು ಮಾಡಿದರು. ಮೊಟ್ಟ ಮೊದಲು ಧರ್ಮ ಪ್ರಚಾರದ ವ್ಯವಸ್ಥೆ ಜಾರಿಗೆ ತಂದವರು ಬುದ್ಧ. ನಂತರ ಮಾಡಿದವರು ಬಸವಣ್ಣನವರಾಗಿದ್ದಾರೆ. ವೈದಿಕ ವ್ಯವಸ್ಥೆ ಅಕ್ಟೋಪಸ್ ಇದ್ದಂತೆ. ನಿಮ್ಮನ್ನು ಜೋತಿಷ್ಯ, ಪಂಚಾಂಗ ಹೇಳಿ ನಂಬಿಸಿ ಕಟ್ಟಿ ಹಾಕಿದೆ. ವಾಸ್ತು, ಪಂಚಾಂಗ, ಜೋತಿಷ್ಯವನ್ನು ಎಂತದ್ದೇ ಪರಿಸ್ಥಿತಿಯಲ್ಲಿ ನಂಬಲೇಬಾರದು ಎಂದು ಹೇಳಿದರು.

ಮಹಿಳೆಯರಿಗೆ ಮಠಗಳಲ್ಲಿ ಆಶ್ರಯ ಕೊಟ್ಟು ಮಠಾಧೀಶರನ್ನಾಗಿ ಮಾಡಿದ ಲಿಂಗಾನಂದ ಸ್ವಾಮೀಜಿ ಹಲವಾರು ತೊಂದರೆ ಅನುಭವಿಸಿದರು. ದಾವಣಗೆರೆ ಮಠ ಕಳೆದುಕೊಳ್ಳಬೇಕಾಯಿತು. ಸ್ಥಾವರಕ್ಕಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂದು ನಂಬಿ ಪ್ರವಚನ ಮೂಲಕ ಬಸವ ಧರ್ಮ ಪೀಠವನ್ನು ಕಟ್ಟಿ ನೂರಾರು ಸಾಧಕಿಯರಿಗೆ ಆಶ್ರಯ ಕೊಟ್ಟರು ಎಂದರು.

ಮಾತೆ ಗಂಗಾದೇವಿ, ಮಾಹಾದೇಶ್ವರ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನ ಬಸವಾನಂದ ಸ್ವಾಮೀಜಿ, ಚನ್ನಬಸವರಾಜ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ಸತ್ಯಾದೇವಿ ಇತರರಿದ್ದರು.

ಬಸವ ಪಥ ಸಂಚಲನ:ಸೋಮವಾರ ಸಂಜೆ 6 ಗಂಟೆಗೆ ಕೂಡಲಸಂಗಮದ ಬಸವೇಶ್ವರ ಐಕ್ಯ ಮಂಟಪದಿಂದ ಬಸವಧರ್ಮ ಪೀಠದ ಮಹಾಮನೆವರೆಗೆ ಬೃಹತ್ ಪಥ ಸಂಚಲನ ಸಮಾರಂಭ ನಡೆಯಿತು. ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಬಸವಣ್ಣ ಐಕ್ಯ ಸ್ಥಳಕ್ಕೆ ಪೂಜೆ ಸಲ್ಲಿಸಿ ಪಥ ಸಂಚಲನಕ್ಕೆ ಚಾಲನೆ ನೀಡಿದರು. ವಿವಿಧ ರಾಜ್ಯದಿಂದ ಬಂದ ಸಾವಿರಾರು ಶರಣ- ಶರಣೆಯರು ವಚನಗಳಿಗೆ ಜಯಕಾರ, ವಚನಗಳನ್ನು ಹಾಡಿದರು. 7 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಪ್ರಾರ್ಥನೆ ಮಾಡಿದರು.