ಸರ್ವಪತನ ‘ಹೃದಯ’ಕಂಪನ

ಅತೃಪ್ತ ಶಾಸಕರ ರಾಜೀನಾಮೆಯ ಬಿರುಗಾಳಿಗೆ ತತ್ತರಿಸಿ ಐಸಿಯು ಸೇರಿ ಗುಟುಕುಜೀವ ಉಳಿಸಿಕೊಂಡಿದ್ದ ಸಮ್ಮಿಶ್ರ ಸರ್ಕಾರ ಈಗ ಅಕ್ಷರಶಃ ಪತನದಂಚಿಗೆ ತಲುಪಿದೆ. ಅತೃಪ್ತರ ಮನವೊಲಿಸುವ ವಿಶ್ವಾಸದಲ್ಲಿದ್ದ ದೋಸ್ತಿ ನಾಯಕರ ಸರಣಿ ಪ್ರಯತ್ನಗಳ ಹೊರತಾಗಿಯೂ ಬುಧವಾರ ಮತ್ತಷ್ಟು ಸಂಖ್ಯೆಯ ಶಾಸಕರು ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳುವ ಆಸೆಯನ್ನು ಕೈಬಿಟ್ಟಿರುವ ಉಭಯ ಪಕ್ಷಗಳು ಕೈಕೊಟ್ಟವರ ಅನರ್ಹತೆಗೆ ವಿಪ್ ಅಸ್ತ್ರ ಪ್ರಯೋಗಿಸುವ ನಿರ್ಧಾರಕ್ಕೆ ಬಂದಿವೆ. ಹೀಗಾಗಿ ಗುರುವಾರ ನಡೆಯಲಿರುವ ಸಭೆಯೇ ಈ ಸರ್ಕಾರದ ಅಂತಿಮ ಸಂಪುಟ ಸಭೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಆರಂಭವಾಗಲಿರುವ ಅಧಿವೇಶನದಲ್ಲಿ ಸಿಎಂ ವಿದಾಯ ಭಾಷಣ ಮಾಡಲಿದ್ದಾರೆ. ಇವಿಷ್ಟು ರಾಜ್ಯಕಾರಣಕ್ಕೆ ಸೀಮಿತವಾದರೆ ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಗೆಲ್ಲುವ ತಂಡಗಳ ಪೈಕಿ ಅಗ್ರಸ್ಥಾನದಲ್ಲಿದ್ದ ಭಾರತ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್​ಗೆ ಶರಣಾಗಿದೆ. ಆ ಮೂಲಕ ವಿಶ್ವಕಪ್ ಗೆಲ್ಲುವ ಕನಸೂ ನುಚ್ಚುನೂರಾಗಿದೆ.

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ದೋಸ್ತಿಪಡೆಗಳ ಸರ್ಕಸ್ ಯಾವುದೇ ಪವಾಡ ಮಾಡದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ‘ಕುಮಾರ ಸಂಭವ’ಕೊನೆಗೊಳ್ಳುವುದು ಬಹುತೇಕ ನಿಕ್ಕಿಯಾಗಿದೆ. ಗುರುವಾರ ಮೈತ್ರಿ ಸರ್ಕಾರದ ಕೊನೆಯ ಸಂಪುಟ ಸಭೆ ನಡೆಯಲಿದ್ದು, ಜುಲೈ 12ರಂದು ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ವಿದಾಯ ಭಾಷಣ ಮಾಡಿ ಸಿಎಂ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ.

ಇದೇ ವೇಳೆ ಸರ್ಕಾರದ ಪತನಕ್ಕೆ ಕಾರಣವಾಗುತ್ತಿರುವ 14 ಶಾಸಕರಿಗೆ ಅನರ್ಹತೆ ಕುಣಿಕೆ ತೊಡಿಸಲೇಬೇಕೆಂದು ಜಿದ್ದಿಗೆ ಮೈತ್ರಿ ಪಕ್ಷಗಳ ನಾಯಕರು ಬಿದ್ದಿದ್ದಾರೆ. ಶುಕ್ರವಾರದ ಅಧಿವೇಶನದಲ್ಲಿ ವಿಪ್ ಜಾರಿ ಮಾಡಿ, ಸದನಕ್ಕೆ ಹಾಜರಾಗದ ಶಾಸಕರನ್ನು ಅನರ್ಹಗೊಳಿಸುವಂತೆ ಎರಡೂ ಪಕ್ಷಗಳು ಶಿಫಾರಸು ಮಾಡಲಿವೆ.

ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ಜಂಟಿ ಪ್ರಯತ್ನ ನಡೆಸಿದಾಗ್ಯೂ ಬುಧವಾರ ಮತ್ತಿಬ್ಬರು ಶಾಸಕರು ಶಾಸಕ ಸ್ಥಾನಕ್ಕೆ ‘ಕ್ರಮಬದ್ಧ’ ರೀತಿಯಲ್ಲಿ ರಾಜೀನಾಮೆ ನೀಡಿದ್ದರಿಂದ ಸರ್ಕಾರ ಉಳಿವಿಗಿದ್ದ ಸಣ್ಣ ಆಸೆ ಕೂಡ ಕಮರಿತು. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಸರ್ಕಾರ ವಿಸರ್ಜಿಸುವ ಬಗ್ಗೆ ಚರ್ಚೆ ನಡೆಸಿದರು. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷಿಯ ಮೈತ್ರಿ ಸರ್ಕಾರ 417ನೇ ದಿನಕ್ಕೆ ಕೊನೆಗೊಳ್ಳುತ್ತಿದೆ.

2018ರ ಮೇ 23ರಂದು ಸರ್ಕಾರ ರಚನೆಯಾದಾಗಿನಿಂದ ಬಿಜೆಪಿಯ ಆಪರೇಷನ್ ಕಮಲದ ಪ್ರಯತ್ನಕ್ಕೆ ಆರು ಬಾರಿ ಸರ್ಕಾರ ಕಂಪಿಸಿತ್ತು. ಆದರೆ ಏಳನೇ ಬಾರಿ ಬಿಜೆಪಿ ಪ್ರಯತ್ನ ಮೇಲಿನ ಮಟ್ಟದಲ್ಲಿ ನಡೆಸಿದ್ದರಿಂದ ‘ಅವಕಾಶ ಲಕ್ಷಿ್ಮ’ ಮನೆಬಾಗಿಲಿಗೆ ಬಂದು ನಿಂತಿದ್ದಾಳೆ.

ಮುಂಬೈನಲ್ಲಿ ಹೈಡ್ರಾಮಾ: ಮತ್ತೊಂದೆಡೆ, ಅತೃಪ್ತರ ಮನವೊಲಿಸಿ ಕರೆತರುವುದಾಗಿ ಮುಂಬೈಗೆ ಆತ್ಮವಿಶ್ವಾಸದಲ್ಲಿ ತೆರಳಿದ್ದ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಜಿ.ಟಿ.ದೇವೇಗೌಡ ತಂಡ ಪೊಲೀಸ್ ವಶಕ್ಕೊಳಗಾಯಿತು. ಹೋಟೆಲ್ ಪ್ರವೇಶವೂ ಸಾಧ್ಯವಾಗದೆ, ಮಳೆಯಲ್ಲೇ ರಸ್ತೆಯಲ್ಲಿ ತಿಂಡಿ ತಿನ್ನುವ ಸ್ಥಿತಿ ನಿರ್ವಣವಾಗಿತ್ತು. ಈ ರಾಜಕೀಯ ಪ್ರಕ್ಷುಬ್ಧ ವಾತಾವರಣದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಂಡ ಚುರುಕಾದ ಚಟುವಟಿಕೆ ನಡೆಸಿತು. ಬೆಳಗ್ಗೆ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಸಿಎಂ ರಾಜೀನಾಮೆಗೆ ಒತ್ತಾಯಿಸಿತು. ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ, ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್​ಗೆ ಸೂಚಿಸುವಂತೆ ಮತ್ತು ಸಿಎಂ ರಾಜೀನಾಮೆ ನೀಡಲು ಸೂಚಿಸುವಂತೆ ಮನವಿ ಮಾಡಿತು. ಮಧ್ಯಾಹ್ನ ಸ್ಪೀಕರ್ ಅವರನ್ನೂ ಭೇಟಿ ಮಾಡಿ ಶಾಸಕರ ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸುವಂತೆ ಒತ್ತಾಯಿಸಿತು. ಬಿಜೆಪಿಯ ಈ ಪ್ರಯತ್ನಕ್ಕೆ ಪ್ರತಿಯಾಗಿ ಕಾಂಗ್ರೆಸ್ ರಾಜಭವನ ಚಲೋ ನಡೆಸಿತು. ನಾಯಕರೆಲ್ಲ ರಾಜಭವನದತ್ತ ತೆರಳುತ್ತಿದ್ದಂತೆ ಪೊಲೀಸರು ಅವರನ್ನೆಲ್ಲ ಬಂಧಿಸಿ ಬಿಡುಗಡೆಗೊಳಿಸಿದರು.

ಉಳಿವು ಹೇಗೆ?: ರಾಜೀನಾಮೆ ಕೊಟ್ಟ ಶಾಸಕರ ಪೈಕಿ ಕನಿಷ್ಠ 5 ಮಂದಿಯಾದರೂ ಮನಸ್ಸು ಬದಲಾಯಿಸಬೇಕು. ಅವರೆಲ್ಲ ಬಹುಮತ ಸಾಬೀತು ಪ್ರಸಂಗ ನಡೆದರೆ ಅಲ್ಲಿ ಸರ್ಕಾರದ ಪರ ಮತ ಚಲಾಯಿಸಬೇಕು. ಇಲ್ಲವೇ ಬಿಜೆಪಿ ಶಾಸಕರನ್ನು ಸೆಳೆಯಬೇಕು.

ಅಳಿವು ಹೇಗೆ?: ಸ್ಪೀಕರ್ ಕ್ರಮಬದ್ಧ ರೂಪದಲ್ಲಿ ಸಲ್ಲಿಕೆಯಾದ ಶಾಸಕರ ರಾಜೀನಾಮೆ ಅಂಗೀಕರಿಸಿದರೂ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ಒಂದು ವೇಳೆ ಬಹುಪಾಲು ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕ್ರಮವಾದರೂ ಸರ್ಕಾರ ಉಳಿಯದು.

ಅನುಮಾನ ಬಾಕಿ: ಜು.12ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಅಷ್ಟರಲ್ಲಿ ಎಲ್ಲ ರಾಜೀನಾಮೆ ಅಂಗೀಕಾರವಾಗುವುದು ಅನುಮಾನ. ಗದ್ದಲದಲ್ಲೇ ಕಲಾಪ ನಡೆಸಲು ಸಿಎಂಗೂ ಅವಕಾಶವಿದೆ. ಜತೆಗೆ ಸುಪ್ರಿಂಕೋರ್ಟ್ ಗುರುವಾರ ಪ್ರಕರಣ ಕೈಗೆತ್ತಿಕೊಳ್ಳಲಿದ್ದು, ಅಲ್ಲಿನ ಮಾರ್ಗದರ್ಶನ ಕೂಡ ನಿರ್ಣಾಯಕ.

ಇಬ್ಬರ ರಾಜೀನಾಮೆ

ಕಳೆದೊಂದು ವಾರದಿಂದೀಚೆಗಿನ ಅನಿರೀಕ್ಷಿತ ಬೆಳವಣಿಗೆಗಳ ಕೊಂಡಿ ಬುಧವಾರವೂ ಮುಂದುವರಿಯಿತು. ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಕೆ.ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ನಾಯಕರನ್ನು ದಿಕ್ಕೆಡುವಂತೆ ಮಾಡಿದರು.

ಇಂದು ಮಹತ್ವದ ನಿರ್ಧಾರ…

ಗುರುವಾರ ಬೆಳಗ್ಗೆ 10ಕ್ಕೆ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಅದು ಬಹುತೇಕ ಈ ಸರ್ಕಾರದ ಕೊನೆಯ ಸಂಪುಟ ಸಭೆಯಾಗಲಿದೆ. ಜಿಂದಾಲ್ ಭೂಮಿ ಪರಭಾರೆ ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಶಾಸಕ ಸುಧಾಕರ್​ಗೆ ಮುತ್ತಿಗೆ, ತಳ್ಳಾಟ

ಶಾಸಕರ ರಾಜೀನಾಮೆ ವೇಳೆ ವಿಧಾನಸೌಧದಲ್ಲಿ ಹೈಡ್ರಾಮಾವೂ ನಡೆಯಿತು. ಸುಧಾಕರ್ ರಾಜೀನಾಮೆ ಕೊಟ್ಟು ಹೊರಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅಡ್ಡಗಟ್ಟಿದರು, ಪರಿಷತ್ ಸದಸ್ಯ ನಸಿರ್ ಅಹ್ಮದ್ ಅಂತೂ ಸುಧಾಕರ್ ಕಾಲರ್ ಹಿಡಿದರು. ಜತೆಗೆ ತಳ್ಳಾಡಿಕೊಂಡು ಸಚಿವ ಕೆ.ಜೆ.ಜಾರ್ಜ್ ಕೊಠಡಿಯಲ್ಲಿ ಕೂರಿಸಿಕೊಂಡು ಬಾಗಿಲುಹಾಕಿ ಮನವೊಲಿಕೆ ಪ್ರಯತ್ನ ಮಾಡಿದರು. ಪ್ರಯತ್ನ ಫಲಿಸದೇ ಇದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಅಲ್ಲಿಗಾಗಮಿಸಿ ತಿಳಿಹೇಳಿದರು. ಅಷ್ಟರಲ್ಲಾಗಲೇ ಬಿಜೆಪಿ ಶಾಸಕರು ಕೊಠಡಿ ಮುಂದೆ ಗುಂಪುಗಟ್ಟಿ ಅಬ್ಬರಿಸಿದರು. ವಿಷಯ ಗಮನಿಸಿದ ರಾಜ್ಯಪಾಲ ವಿ.ಆರ್.ವಾಲಾ ನಗರ ಪೊಲೀಸ್ ಆಯುಕ್ತರಿಗೆ ಸಂದೇಶ ಕಳಿಸಿ, ಕೆ.ಸುಧಾಕರ್ ಅವರಿಗೆ ರಕ್ಷಣೆ ನೀಡಿ ರಾಜಭವನಕ್ಕೆ ಕರೆತರುವಂತೆ ಸೂಚಿಸಿದರು. ಬಳಿಕ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದನ್ನು ಖಚಿತಪಡಿಸಿಕೊಂಡರು.

ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಕ್ರಮಕ್ಕೆ ಸ್ಪೀಕರ್​ಗೆ ದೂರು ನೀಡಿದ್ದೇವೆ. ಅದಕ್ಕಾಗಿ ವಿಪ್ ನೀಡಲಿದ್ದೇವೆ. ಸದನದಲ್ಲಿಯೇ ಎಲ್ಲವೂ ತೀರ್ವನವಾಗಲಿ.

| ಈಶ್ವರ ಖಂಡ್ರೆ, ಕಾರ್ಯಾಧ್ಯಕ್ಷ, ಕೆಪಿಸಿಸಿ

Leave a Reply

Your email address will not be published. Required fields are marked *