ಚಳಿಯಲ್ಲಿ ಕುದಿವೇಶನ

ಮೈತ್ರಿ ಸರ್ಕಾರ ಹಾಗೂ ವಿಪಕ್ಷ ಬಿಜೆಪಿ ನಡುವಿನ ಹೊಯ್ದಾಟಕ್ಕೆ ಸೋಮವಾರ ಬೆಳಗಾವಿಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ವೇದಿಕೆ ಕಲ್ಪಿಸಿದೆ. ಕಬ್ಬು ಬೆಳೆಗಾರರ ಸಮಸ್ಯೆ, 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆರೋಪ ಸೇರಿದಂತೆ ಸರಣಿ ಸವಾಲು ಆಡಳಿತಾರೂಢ ಜೆಡಿಎಸ್, ಕಾಂಗ್ರೆಸ್ ಚಿಂತೆ ಹೆಚ್ಚಿಸಿದ್ದರೆ, ಈವರೆಗಿನ ಹಿನ್ನಡೆ ಮರೆತು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿ ಲೋಕಸಭೆ ಚುನಾವಣೆಗೆ ಕಹಳೆ ಊದಲು ಬಿಜೆಪಿ ಉತ್ಸುಕವಾಗಿದೆ. ಮೂರೂ ಪಕ್ಷಗಳ ಕಾರ್ಯತಂತ್ರ, ಸವಾಲುಗಳ ವಿಶ್ಲೇಷಣೆ ಇಲ್ಲಿದೆ.

ಕೈಪಡೆಗೆ ಕ್ಯಾಪ್ಟನ್ ಚಿಂತೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧಿವೇಶನ ಸಂದರ್ಭದಲ್ಲೇ ವಿದೇಶ ಪ್ರವಾಸಕ್ಕೆ ಅಣಿಯಾಗಿರುವುದು ಕಾಂಗ್ರೆಸ್ ನಾಯಕರ ಚಿಂತೆ ಹೆಚ್ಚಿಸಿದೆ. ಪ್ರತಿಪಕ್ಷ ಬಿಜೆಪಿಯನ್ನು ಮಾತಿನಿಂದಲೇ ಸದನದಲ್ಲಿ ಕಟ್ಟಿಹಾಕುತ್ತಿದ್ದ ಸಿದ್ದರಾಮಯ್ಯ ಸ್ಥಾನ ತುಂಬುವುದು ಯಾರೆಂದು ರಾಜ್ಯ ನಾಯಕರು ಚಿಂತೆಗೀಡಾಗಿದ್ದಾರೆ. ಹಾಗೆಯೇ ಅತೃಪ್ತ ಸಚಿವಾಕಾಂಕ್ಷಿಗಳ ಮೇಲೆ ನಿಯಂತ್ರಣ ಹೊಂದಿದ್ದ ಸಿದ್ದರಾಮಯ್ಯ ಗೈರು ಮತ್ತೆ ಭಿನ್ನಮತದ ಕಾವು ಹೆಚ್ಚಿಸಬಹುದೆಂಬ ಆತಂಕವೂ ಕಾಂಗ್ರೆಸ್ ಪಾಳಯದಲ್ಲಿ ಕವಿದಿದೆ. ಸಿದ್ದು ವಿದೇಶಕ್ಕೆ ತೆರಳಿದ ಬಳಿಕ ಬಂಡಾಯ ಶಾಸಕರು ಅಧಿವೇಶನವನ್ನೇ ಬಹಿಷ್ಕರಿಸುವ ಸಾಧ್ಯತೆಯೂ ಗೋಚರಿಸಿದೆ. ಇದಲ್ಲದೆ ಹುಬ್ಬಳ್ಳಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವುದರಿಂದ ಶಾಸಕರು ಕಲಾಪದಿಂದ ದೂರ ಉಳಿಯಲು ನೆಪವಾಗ ಬಹುದೆಂಬ ಆತಂಕವೂ ಇದೆ. ಈ ಗೊಂದಲಗಳ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕ್ರೆಡಿಟ್ ತಪ್ಪಿಸಲು ಕಾಂಗ್ರೆಸ್ಸಿಗರು ಸದನದಲ್ಲಿ ಮೌನಕ್ಕೆ ಜಾರಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಪ್ರಮುಖ ಮಸೂದೆಗಳು

  • ಬಹುಚರ್ಚಿತ ಭೂಮಿ ಗುತ್ತಿಗೆ ಮಸೂದೆ, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಮಸೂದೆ
  • ಒಪ್ಪಂದ ಕೃಷಿ ಮಸೂದೆ, ಘನತ್ಯಾಜ್ಯ ನಿರ್ವಹಣೆ, ಕೆಲವು ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆ

ಜೆಡಿಎಸ್ ಜಿಜ್ಞಾಸೆ

ಸದನದಲ್ಲಿ ಅತಿ ಕಡಿಮೆ ಸಂಖ್ಯೆಯನ್ನು ಹೊಂದಿರುವ ಜೆಡಿಎಸ್​ಗೆ ಈಗ ಕಾಂಗ್ರೆಸ್ ಬೆಂಬಲದ್ದೇ ಚಿಂತೆ. ಪ್ರತಿಪಕ್ಷಗಳ ಆರೋಪಕ್ಕೆ ಸಿಎಂ ಭಾವನಾತ್ಮಕ ಪ್ರತಿಕ್ರಿಯೆ ನೀಡುವ ಸಂಭವ ಜಾಸ್ತಿ. ಜೆಡಿಎಸ್​ನಲ್ಲಿನ ಸಚಿವರೂ ಆ ಮಟ್ಟಿಗೆ ಪರಿಸ್ಥಿತಿ ನಿಭಾಯಿಸುವವರಲ್ಲ. ಪರಮೇಶ್ವರ್, ಡಿಕೆಶಿ ಸೀಮಿತ ದಾಳಿ ನಡೆಸುತ್ತಾರೆ. ಸರ್ಕಾರ ಮುನ್ನಡೆಸುತ್ತಿರುವ ಪಕ್ಷಕ್ಕೇ ಹೆಚ್ಚು ಕ್ರೆಡಿಟ್ ಸಿಗುತ್ತದೆ ಎಂದಾದರೆ ಸದೃಢವಾಗಿ ಸಿಎಂ ಜತೆ ನಿಲ್ಲುತ್ತಾರೆಯೇ ಎಂಬುದೂ ಪ್ರಶ್ನೆ. ಇದನ್ನೂ ಮೀರಿ ಉತ್ತರ ಕರ್ನಾಟಕ ಪರ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಉತ್ತರ ವಿರೋಧಿ ಹಣೆಪಟ್ಟಿ ಕಳಚಿ ಕೊಳ್ಳುವ ಅವಕಾಶವೂ ಸಿಎಂ ಎದುರಿಗಿದೆ.

ಬಿಜೆಪಿಗೆ ಸುವರ್ಣಾವಕಾಶ

ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನ ಜಯಿಸಿದ್ದರೂ ಸರ್ಕಾರ ರಚನೆಗೆ ಸಿಗದ ಅವಕಾಶ, ಇತ್ತೀಚಿನ ಪಂಚ ಕ್ಷೇತ್ರಗಳ ಉಪಚುನಾವಣೆಯಲ್ಲಾದ ವೈಫಲ್ಯಗಳ ನಡುವೆಯೇ ಮುಂಬರುವ ಲೋಕಸಭಾ ಚುನಾವಣೆಗೆ ಶಕ್ತಿ ಪಡೆಯಲು ಬಿಜೆಪಿಗೆ ಅಧಿವೇಶನ ಅವಕಾಶ ಕಲ್ಪಿಸಿದೆ. ಸರ್ಕಾರ ರಚನೆಯಾಗುತ್ತದೆ, ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದುಕೊಂಡೇ ಕಾಲಹಾಕಿದ ಬಿಜೆಪಿ, ಸರ್ಕಾರದ ವಿರುದ್ಧ ಹೋರಾಟ ಹಾಗೂ ಸಂಘಟನೆಯ ಬಲವರ್ಧನೆಗೆ ಹೆಚ್ಚು ಒತ್ತು ನೀಡಲಿಲ್ಲ. ಆ ವೇಳೆಗೆ ಸಿಎಂ ಹೇಳಿಕೆಯಿಂದಲೇ ಬಿರುಸು ಪಡೆದು ರಾಜ್ಯಮಟ್ಟಕ್ಕೆ ವಿಸ್ತರಿಸಿದ ಕಬ್ಬು ಬೆಳೆಗಾರರ ಪ್ರತಿಭಟನೆ ಬಿಜೆಪಿಗೆ ಪ್ರಬಲ ಅಸ್ತ್ರವನ್ನೇ ಕೈಗಿಟ್ಟಿತು. ಸಿ.ಟಿ. ರವಿ, ಎನ್. ರವಿಕುಮಾರ್, ಅರವಿಂದ ಲಿಂಬಾವಳಿ ಮೊದಲಾದ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಕೆಲವು ವಿಷಯಗಳನ್ನು ಪ್ರಸ್ತಾಪಿಸಿ ಅಧಿವೇಶನಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಳಗಾವಿಯಲ್ಲಿ ರೈತರ ಬೃಹತ್ ಪ್ರತಿಭಟನೆಯೂ ನಡೆಯುತ್ತಿರುವುದು ಸಂಘಟನೆ ಬಲವರ್ಧನೆ ಜತೆಗೆ ಲೋಕಸಭೆ ಸಿದ್ಧತೆಗೂ ಅವಕಾಶ ಕಲ್ಪಿಸಿದೆ.


ಬೆಳಗಾವಿ ಅಧಿವೇಶನದಲ್ಲಿ ಮೈತ್ರಿ ಸವಾಲು

ಬೆಂಗಳೂರು: ಸರ್ಕಾರದ ಯೋಜನೆಗಳು, ಜನೋಪಯೋಗಿ ನಿರ್ಧಾರಗಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಾದರೂ, ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಮೈತ್ರಿ ಸರ್ಕಾರದ ಪಕ್ಷಗಳ ಹೊಂದಾಣಿಕೆ ಒರೆಗೆ ಹಚ್ಚಲಿದೆ ಎಂಬುದು ನಿಶ್ಚಿತ.

ಸರ್ಕಾರದ ಪ್ರಾರಂಭಿಕ ದಿನದಿಂದಲೂ ಉತ್ತರ ಕರ್ನಾಟಕ ವಿರೋಧಿ ಎಂಬ ಹಣೆಪಟ್ಟಿ ಆಗಿಂದಾಗ್ಗೆ ಹಚ್ಚಲ್ಪಡುತ್ತಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ಆಡಿದ ಮಾತುಗಳು ಇದಕ್ಕೆ ತುಪ್ಪ ಸುರಿದು ಪ್ರತ್ಯೇಕ ರಾಜ್ಯ ಹೋರಾಟದ ಮಟ್ಟಕ್ಕೂ ಮುಟ್ಟಿದ್ದು ಇತಿಹಾಸ. ಜತೆಗೆ ನೈಸ್ ಹಗರಣದಲ್ಲಿ ಸಿಎಂ ಕ್ರಮ ಕೈಗೊಳ್ಳುವರೇ? ಕಬ್ಬು ಬೆಳೆಗಾರರ ಸಮಸ್ಯೆ, ಕೆಲ ದಿನದ ಹಿಂದಷ್ಟೇ ಬಿಡುಗಡೆ ಮಾಡಿರುವ 35 ಸಾವಿರ ಕೋಟಿ ರೂ. ಅವ್ಯವಹಾರದ ಸಿಎಜಿ ವರದಿ ಸೇರಿ ಅನೇಕ ವಿಷಯಗಳನ್ನು ಪ್ರತಿಪಕ್ಷ ಬಿಜೆಪಿ ಮುಂದಿಟ್ಟುಕೊಂಡು ಹೋರಾಟ ನಡೆಸಲಿದೆ.

ಮೈತ್ರಿ ಸರ್ಕಾರದಲ್ಲಿ ಎಲ್ಲ ಆರೋಪ, ಹೋರಾಟಗಳಿಗೆ ಸದನದ ಒಳಗೆ ಸೂಕ್ತ ಉತ್ತರ ನೀಡಿ ಸರ್ಕಾರದ ಮುಖಭಂಗ ತಡೆಯಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆಯ ವಿಷಯ. ಸಾಲಮನ್ನಾದ ಭಾವನಾತ್ಮಕ ಲಾಭ ಪಡೆಯಲು ಸಿಎಂ ಕುಮಾರಸ್ವಾಮಿಯಿಂದ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದರ ಕ್ರೆಡಿಟ್ ಸಿಎಂಗೆ ಹೋಗುತ್ತದೆ ಎಂಬ ಕಾಂಗ್ರೆಸ್ ಚಿಂತನೆಯೂ ಇದಕ್ಕೆ ಕಾರಣ. ಇದೆಲ್ಲದರ ನಡುವೆ, ಪ್ರತಿಪಕ್ಷಗಳ ಮಾತಿಗೆ ಸರಿಯಾದ ಪ್ರತ್ಯುತ್ತರ ನೀಡಬಲ್ಲವರಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿರುವುದು, ಅವರ ಬೆಂಬಲಿಗರು ಅಧಿವೇಶನದಲ್ಲಿ ಎಷ್ಟರಮಟ್ಟಿಗೆ ಹಾಜರಿರುತ್ತಾರೆ ಎಂಬ ಪ್ರಶ್ನೆಯನ್ನೂ ಎತ್ತಿದೆ.

ಅಧಿವೇಶನಕ್ಕೂ ಮುನ್ನ ಶಾಸಕಾಂಗ ಪಕ್ಷದ ಸಭೆ ಕರೆದು ಹೋರಾಟದ ರೂಪುರೇಷೆ ನಿರ್ಧರಿಸುವುದು ವಾಡಿಕೆ. ಆದರೆ ಎದುರಾಳಿಗಳ ವಿರುದ್ಧ ಒಗ್ಗಟ್ಟು ಪ್ರದರ್ಶನ ಪ್ರಧಾನವಾಗಿ ನಿರ್ಧಾರವಾಗುತ್ತದೆ. ಡಿ.10ಕ್ಕೆ ನಿಗದಿಯಾಗಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಡಿ.18ಕ್ಕೆ ಮುಂದೂಡಿರುವುದು ಕಾಂಗ್ರೆಸ್​ನಲ್ಲಿ, ಪ್ರಮುಖವಾಗಿ ಸಚಿವಾಕಾಂಕ್ಷಿ ಶಾಸಕರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಸಚಿವ ಸಂಪುಟ ಸೇರಲು ಹಪಹಪಿಸುತ್ತಿರುವ ಕೈ ಶಾಸಕರು ಅವರದೇ ಪಕ್ಷದ ನಾಯಕರ ಅಗೋಚರ ನಡೆಯಿಂದ ಕಕ್ಕಾಬಿಕ್ಕಿಯಾಗಿದ್ದಾರೆ. ಪ್ರತಿಪಕ್ಷದ ವಾಗ್ದಾಳಿ ಎದುರಿಸುವಲ್ಲಿ ಹೆಚ್ಚಿನ ಆಕ್ರಮಣಕಾರಿ ಧೋರಣೆ ಪ್ರದರ್ಶಿಸದ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಲವು ವಿಷಯಕ್ಕಷ್ಟೇ ಸೀಮಿತ ದಾಳಿ ನಡೆಸುವ ಹಿರಿಯ ಸಚಿವ ಡಿ.ಕೆ.ಶಿವಕುಮಾರ್ ಅವರುಗಳ ಉಪಸ್ಥಿತಿಯಲ್ಲಿ ತನ್ನ ನಿಲುವನ್ನು ಸರ್ಕಾರ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತದೆ ಎಂಬುದು ಮುಂದಿನ 10 ದಿನಗಳಲ್ಲಿ ತಿಳಿಯುತ್ತದೆ.

ಮುಂದುವರಿದ ಅಹೋರಾತ್ರಿ ಧರಣಿ

ಕಬ್ಬು ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರ ತೂಕದ ಯಂತ್ರಗಳನ್ನು ಅಳವಡಿಸಬೇಕು. ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲೇ ಕಬ್ಬಿಗೆ ಎಫ್​ಆರ್​ಪಿ ದರ ನಿಗದಿ ಮಾಡಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿದಿದೆ. ಇದಕ್ಕೆ ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದ್ದಾರೆ.

37 ಸಂಘಟನೆಗಳ ಪ್ರತಿಭಟನೆ!

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಸಂದರ್ಭ ಸುವರ್ಣಸೌಧದ ಹೊರಗೆ ಪ್ರತಿಭಟನೆ ನಡೆಸಲು ಒಟ್ಟು 62 ಸಂಘಟನೆಗಳು ಅನುಮತಿಗಾಗಿ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದು, ಇದುವರೆಗೆ 37 ಸಂಘಟನೆಗಳಿಗೆ ಅನುಮತಿ ನೀಡಲಾಗಿದೆ. ಅಹೋರಾತ್ರಿ ಧರಣಿಗೆ ಅವಕಾಶ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುವರ್ಣ ಉದ್ಯಾನವದಲ್ಲಿರುವ 9 ಟೆಂಟ್​ಗಳಿಗೆ ತಲಾ ಒಬ್ಬರು ಪಿಎಸ್​ಐ ಸೇರಿ 10 ಪ್ರತ್ಯೇಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ.

ಸಮ್ಮಿಶ್ರ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ. ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ.

| ಡಾ. ಜಯಮಾಲಾ, ಸಚಿವೆ

 

ಬ್ಯಾನರ್ ಗಲಾಟೆ

ಅಧಿವೇಶನಕ್ಕೆ ಆಗಮಿಸುವ ಗಣ್ಯರನ್ನು ಸ್ವಾಗತಿಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಹಲವೆಡೆ ಬ್ಯಾನರ್​ಗಳನ್ನು ಹಾಕಿದ್ದು, ಅದರಲ್ಲಿ ಜಾರಕಿಹೊಳಿ ಸಹೋದರರ ಹೊರತುಪಡಿಸಿ ಪ್ರಮುಖ ಸಚಿವರ ಭಾವಚಿತ್ರಗಳನ್ನು ಪ್ರಕಟಿಸಲಾಗಿದೆ. ಇದು ಜಾರಕಿಹೊಳಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಎಸ್​ವೈ ವಾಸ್ತವ್ಯ ಕೋರಿಕೆ ಈಡೇರಿಸದ ಸರ್ಕಾರ

ಬೆಳಗಾವಿ: ನನಗೆ ಕೆಎಲ್​ಇ ಗೆಸ್ಟ್ ಹೌಸ್​ದಲ್ಲಿಯೇ ಕೊಠಡಿ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಇರಿಸಿದ್ದ ಬೇಡಿಕೆಯನ್ನು ಸರ್ಕಾರ ಈಡೇರಿಲ್ಲ. ಅಂಬೇಡ್ಕರ್ ರಸ್ತೆಯ ಯುಕೆ-27 ಹೋಟೆಲ್​ನಲ್ಲಿ ಕೊಠಡಿ ನೀಡಲಾಗಿದೆ. ಜತೆಗೆ ಪ್ರತಿಪಕ್ಷದ ನಾಯಕರ ಆಪ್ತ ಸಹಾಯಕರು, ಗನ್ ಮ್ಯಾನ್​ಗಳಿಗೆ ಕೊಠಡಿ ನೀಡಿಲ್ಲ. ಸರ್ಕಾರದ ಈ ವ್ಯವಸ್ಥೆ ತಿರಸ್ಕರಿಸಿರುವ ಬಿಎಸ್​ವೈ, ಸ್ವಂತ ಖರ್ಚಿನಲ್ಲಿಯೇ ಕೆಎಲ್​ಇ ಗೆಸ್ಟ್ ಹೌಸ್​ದಲ್ಲಿ ಉಳಿದುಕೊಳ್ಳಲು ತೀರ್ವನಿಸಿದ್ದಾರೆ. ಕಳೆದ ಅನೇಕ ಅಧಿವೇಶನಗಳಲ್ಲಿ ಪ್ರತಿಪಕ್ಷ ಸ್ಥಾನದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಎಸ್​ವೈ ಇಬ್ಬರೂ ಕೆಎಲ್​ಇ ಗೆಸ್ಟ್ ಹೌಸ್​ದಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಕೆಎಲ್​ಇ ಗೆಸ್ಟ್ ಹೌಸ್ ನಿರಾಕರಿಸಿರುವುದು ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣವಾಗಿದೆ.

ಹೋರಾಟಕ್ಕೆ ಬಿಜೆಪಿ ರಣತಂತ್ರ

ಬೆಳಗಾವಿ: ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ ತೀವ್ರ ಬರಗಾಲ ಇದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬೆಳೆ ಸಾಲಮನ್ನಾ ಹೆಸರಿನಲ್ಲಿ ರೈತರನ್ನು ಮೂರ್ಖರನ್ನಾಗಿಸಲಾಗುತ್ತಿದೆ, ಮೈತ್ರಿ ಸರ್ಕಾರದ ವಿರುದ್ಧ ಜನಪರ ಹೋರಾಟ ತೀವ್ರಗೊಳ್ಳಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ನಗರದ ಹೊರವಲಯ ಅಲಾರವಾಡದಲ್ಲಿ ಡಿ.10ರಂದು ಬಿಜೆಪಿ ಆಯೋಜಿಸಿರುವ ರೈತರ ಬೃಹತ್ ಸಮಾವೇಶದ ನಿಗದಿತ ಸ್ಥಳವನ್ನು ಭಾನುವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈತ್ರಿ ಸರ್ಕಾರದ ವಿರುದ್ಧ ಇಲ್ಲಿಂದ ಹೋರಾಟ ಆರಂಭವಾಗಲಿದೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿವೆ. ಯಾವುದೇ ಅಭಿವೃದ್ಧಿ ಕೆಲಸ ಆರಂಭವಾಗಿಲ್ಲ. ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಈ ಕುರಿತು ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲಿದ್ದೇವೆ. ಅಧಿಕಾರ ಸಿಕ್ಕರೆ ಸುವರ್ಣಸೌಧಕ್ಕೆ 10 ಸರ್ಕಾರಿ ಕಚೇರಿ ಸ್ಥಳಾಂತರಿಸಲಾಗುವುದು ಎಂದರು.

ತೀವ್ರ ಬರಗಾಲದಿಂದ ಬಹುತೇಕ ಪ್ರದೇಶಗಳು ಕಂಗೆಟ್ಟಿವೆ. ಹಳ್ಳಿಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಐದು ತಂಡಗಳಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಬರ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಸಿಎಂ ಸೇರಿ ಯಾವುದೇ ಸಚಿವರು ಬರ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿಲ್ಲ. ಇಂತಹ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಡವರ ಶಾಪದಿಂದಲೇ ಸರ್ಕಾರ ಪತನ

ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಮೂಲಸೌಕರ್ಯಗಳ ಸಮಸ್ಯೆ ಬಗೆಹರಿದಿಲ್ಲ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಇದುವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ಚುನಾವಣೆಯಲ್ಲಿ ನಮಗೆ ನೀವು ಮತ ಹಾಕಿಲ್ಲ ಎಂದು ಉಡಾಫೆ ಉತ್ತರ ನೀಡುತ್ತ ಸರ್ವಾಧಿಕಾರಿಯಂತೆ ಸಿಎಂ ಕುಮಾರಸ್ವಾಮಿ ಆಡಳಿತ ನಡೆಸುತ್ತಿದ್ದಾರೆ. ರೈತರು, ಬಡವರ ಶಾಪದಿಂದಲೇ ಸರ್ಕಾರ ಪತನವಾಗುತ್ತದೆ ಎಂದು ಯಡಿಯೂರಪ್ಪ ಹರಿಹಾಯ್ದರು.


ಮುಸುಕು ಸರಿಸಿ ಸಜ್ಜಾದ ಸುವರ್ಣಸೌಧ

ಬೆಳಗಾವಿ: ಮೈತ್ರಿ ಸರ್ಕಾರದ ಆಂತರಿಕ ಕಲಹ ಬಹಿರಂಗವಾಗುವ ಸಾಧ್ಯತೆ ಕಾರಣಕ್ಕೆ ವಿಶೇಷ ಎನಿಸಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭ ಆಗುತ್ತಿದೆ. ಅಧಿವೇಶನವೆಂದರೆ ಪುಟಿದೇಳುತ್ತಿದ್ದ ಬೆಳಗಾವಿಯಲ್ಲಿ ಈ ಬಾರಿ ಉತ್ಸಾಹ ಕಾಣಿಸುತ್ತಿಲ್ಲ. ಹತ್ತರ ನಂತರ ಹನ್ನೊಂದು ಎಂಬ ಸಹಜ ಮನೋಭಾವ ಜನಪ್ರತಿನಿಧಿಗಳು, ಅಧಿಕಾರಿಗಳು, ರಾಜಕೀಯ ನೇತಾರರು, ಜನ ಸಾಮಾನ್ಯರಲ್ಲಿ ಕಾಣಿಸುತ್ತಿದೆ.

ಇಡೀ ಶಾಸಕಾಂಗವೇ ಬರುತ್ತದೆಂಬ ಕಾರಣಕ್ಕೆ ಕಳೆದ 10 ವರ್ಷದಲ್ಲಿ ಅಧಿವೇಶನ ಪೂರ್ವ ತಯಾರಿಯೇ ಸಂಭ್ರಮ, ಸಡಗರದಂತೆ ತೋರುತ್ತಿತ್ತು. ಈ ಬಾರಿ ಅಂತಹ ವಾತಾವರಣ ಕಾಣಿಸುತ್ತಿಲ್ಲ. ಭಾನುವಾರ ಮಧ್ಯಾಹ್ನದ ವೇಳೆಯೂ ಸುವರ್ಣಸೌಧದಲ್ಲಿ ಧೂಳು ಕೊಡಹುವ ಕೆಲಸ ಮುಂದುವರಿದೇ ಇತ್ತು. ಪ್ರತಿ ಬಾರಿ ಅಧಿವೇಶನದ ಮುನ್ನಾದಿನ ಬೀಗರನ್ನು ಎದುರುಗೊಳ್ಳುವವರಂತೆ ಪರಿವೀಕ್ಷಣೆ ಮಾಡುತ್ತಾ ಓಡಾಡುತ್ತಿದ್ದ ಜನನಾಯಕರೂ ಈಗ ಪತ್ತೆ ಇಲ್ಲ. ಉತ್ತರ ಕರ್ನಾಟಕದ ಪಾಲಿನ ಧೀ ಶಕ್ತಿಯಂತಿರುವ ಸೌಧ ಸೂಕ್ತ ನಿರ್ವಹಣೆ ಕಾಣದೆ ಧೂಳಿನಿಂದ ಮುಚ್ಚಿಕೊಂಡು, ಅಧಿವೇಶನಕ್ಕಾಗಷ್ಟೇ ಮುಸುಕು ಸರಿದಂತೆ ಭಾನುವಾರ ಗೋಚರಿಸಿದ್ದು ಸುಳ್ಳಲ್ಲ. ಅಧಿವೇಶನಕ್ಕೆ ತಯಾರಿ ಹೇಗಿದೆ ಎಂದು ಸೌಧಕ್ಕೆ ಒಂದು ಪ್ರದಕ್ಷಿಣೆ ಹಾಕಿದಾಗ ಅಚ್ಚರಿಗಳು ಎದುರಾದವು. ಬಲೆ ಮುತ್ತಿಕೊಂಡ ಸಿಸಿ ಕ್ಯಾಮರಾಗಳು. ಇನ್ನೂ ಬಳಕೆಗೆ ಸಜ್ಜುಗೊಳ್ಳದ ಸ್ಕ್ಯಾನಿಂಗ್ ಯಂತ್ರಗಳು, ಧೂಳು ಮುತ್ತಿಕೊಂಡು ಇನ್ನೂ ತೆಗೆಯದ ಕೆಲವು ಗೇಟುಗಳು ಕಂಡುಬಂದವು.

300 ಹೆಡ್​ಫೋನ್ ಖರೀದಿ: ಈ ಬಾರಿ ಖರ್ಚು- ವೆಚ್ಚ ನೋಡಿಕೊಳ್ಳಲು ನೋಡಲ್ ಅಧಿಕಾರಿ ನೇಮಿಸಲಾಗಿದೆ. ಶಾಸಕರು ಬಳಸುವ ಹೆಡ್​ಫೋನ್​ಗಳ ಕಾರ್ಯಕ್ಷಮತೆ ಗಮನಿಸಿ ದೋಷ ಹೊಂದಿದ್ದನ್ನು ಬದಲಾವಣೆ ಮಾಡಲು 300 ಹೆಡ್​ಫೋನ್​ಖರೀದಿಸಲಾಗಿದೆ.

ಭದ್ರತೆ: ಅಧಿವೇಶನಕ್ಕೆಂದು 4 ಸಾವಿರ ಪೊಲೀಸರು ಬಂದಿಳಿದಿದ್ದು, ಭಾನುವಾರ ಮಧ್ಯಾಹ್ನ ಸ್ಥಳ ನಿಯೋಜನೆ ಪ್ರಕ್ರಿಯೆ ನಡೆಯಿತು.

ಅಕ್ಕಪಕ್ಕ ಹಳೇ ಗೆಳೆಯರು!

ಹಳೇ ಸ್ನೇಹಿತರಾದ ಸಿದ್ದರಾಮಯ್ಯ ಹಾಗೂ ಎಚ್.ವಿಶ್ವನಾಥ್ ಈ ಬಾರಿ ಅಧಿವೇಶನದಲ್ಲಿ ಅಕ್ಕಪಕ್ಕ ಕುಳಿತು ಕಲಾಪದಲ್ಲಿ ಪಾಲ್ಗೊಳ್ಳುವರು. ಕ್ರಮವಾಗಿ 37 ಮತ್ತು 38ನೇ ನಂಬರಿನ ಸೀಟುಗಳನ್ನು ಇವರಿಬ್ಬರಿಗೆ ಮೀಸಲಿಡಲಾಗಿದೆ.

ಊಟದ ಸ್ಪೆಷಲ್

ಕಳೆದೆರಡು ಅಧಿವೇಶನದ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪೊಲೀಸ್ ಹಾಗೂ ಮತ್ತು ಮಾಧ್ಯಮದವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಮಧ್ಯಾಹ್ನದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ದಕ್ಷಿಣ ಕರ್ನಾಟಕದ ಮುದ್ದೆ ಸೊಪ್ಪಿನ ಸಾರು, ಕರಾವಳಿಯ ಕುಚಲಕ್ಕಿ ಅನ್ನ, ಖಾದ್ಯಗಳ ಕೌಂಟರ್ ತೆರೆಯಲಾಗುತ್ತಿದ್ದು, ಯಾರಿಗೆ ಯಾವುದನ್ನೂ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.


ಸಭಾಪತಿ ಸ್ಥಾನ ಯಾರಿಗೆ?

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ, ಪ್ರತಿಪಕ್ಷಗಳು ಪರಸ್ಪರರನ್ನು ಎದುರಿಸಲು ಸಜ್ಜಾಗುತ್ತಿರುವಂತೆಯೇ ವಿಧಾನಪರಿಷತ್ ಸಭಾಪತಿ ಯಾರು ಎಂಬ ಪ್ರಶ್ನೆಯೂ ಅಷ್ಟೇ ಬಲವಾಗಿ ಚರ್ಚೆಯಾಗುತ್ತಿದೆ.

ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೇ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನೇ ಮುಂದುವರಿಸಿಕೊಂಡು ಬರಲಾಗುತ್ತಿದೆ.

ಮೈತ್ರಿ ಸರ್ಕಾರದಲ್ಲಿ ಈಗಾಗಲೇ ಸ್ಪೀಕರ್ ಸ್ಥಾನವನ್ನು ಕಾಂಗ್ರೆಸ್​ನ ರಮೇಶ್​ಕುಮಾರ್​ಗೆ ನೀಡಿರುವ ಕಾರಣ ಪರಿಷತ್​ನಲ್ಲಿ ನಮಗೆ ಪ್ರಾಶಸ್ಱ ಇರಲಿ ಎಂಬ ವಾದವನ್ನೂ ಜೆಡಿಎಸ್ ಮುಂದಿಡುತ್ತಿದೆ. ಬುಧವಾರ ಚುನಾವಣೆ ನಡೆಯಲಿದ್ದು, ಮಂಗಳವಾರ ಹೊರಟ್ಟಿ ರಾಜೀನಾಮೆ ನೀಡಿ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್​ನಲ್ಲೂ ಹಿರಿಯ ಎಸ್.ಆರ್.ಪಾಟೀಲ್ ಹೆಸರನ್ನು ಚಾಲ್ತಿಗೆ ತರಲಾಗಿದೆ. ಉತ್ತರ ಕರ್ನಾಟಕ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳಲು, ಹಿಂದಿನ ಸರ್ಕಾರದ ಅವಧಿಯಲ್ಲಾದ ವೀರಶೈವ-ಲಿಂಗಾಯತ ವಿಚಾರದ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಪಾಟೀಲ್ ಆಯ್ಕೆ ಸ್ವಲ್ಪಮಟ್ಟಿಗೆ ನೆರವಾಗುತ್ತದೆ ಎಂಬುದು ಕಾಂಗ್ರೆಸ್ ವಾದ. ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲವೂ ಇರುವುದು ಪಾಟೀಲ್ ಬಲ ಹೆಚ್ಚಿಸಿದೆ. ಎಚ್.ಡಿ.ದೇವೇಗೌಡರ ಜತೆಗೂ ಮಾತನಾಡಿ, ಪಾಟೀಲ್ ಆಯ್ಕೆಗೆ ಪ್ರಯತ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು ಎನ್ನಲಾಗಿದೆ. ಆದರೀಗ ಸಿದ್ದರಾಮಯ್ಯರೇ ಇರುವುದಿಲ್ಲ.

Leave a Reply

Your email address will not be published. Required fields are marked *