ಫಲಿತಾಂಶ ವಿಳಂಬ, ಅಭ್ಯರ್ಥಿಗಳಲ್ಲಿ ಆತಂಕ

840 ಕುಶಲಕರ್ವಿು ಹಾಗೂ ತಾಂತ್ರಿಕ ಸಹಾಯಕ ಹುದ್ದೆ ಸೇರಿ 1,114 ಹುದ್ದೆಗಳಿಗೆ 2016ರಲ್ಲಿ ಕೆಎಸ್​ಆರ್​ಟಿಸಿ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ 830 ಹುದ್ದೆಗಳ ಅಂತಿಮ ಪಟ್ಟಿ ಪ್ರಕಟಿಸಿದ್ದು, ಉಳಿದ 284 ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶವನ್ನೇ ಪ್ರಕಟಿಸಿಲ್ಲ. ಈ ಕುರಿತು ಅಭ್ಯರ್ಥಿಗಳು ‘ವಿಜಯವಾಣಿ ಸಹಾಯವಾಣಿ’ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದು, ಆ ಬಗ್ಗೆ ನಮ್ಮ ವರದಿಗಾರ ಹೀರಾನಾಯ್ಕ ಟಿ. ಸಿದ್ಧಪಡಿಸಿರುವ ವರದಿ ಇಲ್ಲಿದೆ.

ಸಹಾಯಕ ಹುದ್ದೆ ಸೇರಿ 1,114 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ಪರೀಕ್ಷೆ ಬರೆದ ಅಭ್ಯರ್ಥಿಗಳ ಪೈಕಿ 830 ಮಂದಿ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಪರೀಕ್ಷೆ ಫಲಿತಾಂಶ ವಿಳಂಬದಿಂದಾಗಿ 284 ಹುದ್ದೆಗಳಿಗೆ ನೇಮಕ ನಡೆಯದಿರುವುದು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ.

ಹುದ್ದೆಗಳ ವಿವರ: ಸಹಾಯಕ ಲೆಕ್ಕಿಗ-71, ಸಹಾಯಕ ಸಂಚಾರ ನಿರೀಕ್ಷಕ -128, ಸಹಾಯಕ ಉಗ್ರಾಣ ರಕ್ಷಕ -34, ಅಂಕಿ-ಅಂಶ ಸಹಾಯಕ -41, ಕುಶಲಕರ್ವಿು ದರ್ಜೆ-3ರಲ್ಲಿ ಆಟೋ ಮೆಕ್ಯಾನಿಕ್ -160, ಆಟೋಬಾಡಿ ಬಿಲ್ಡರ್- 44, ಆಟೋ ಎಲೆಕ್ಟ್ರಿಷಿಯನ್ -60, ಆಟೋ ಪೇಂಟರ್- 4, ಆಟೋ ವೆಲ್ಡರ್ -15, ಆಟೋ ಮಷಿನಿಷ್ಟ್ -1, ತಾಂತ್ರಿಕ ಸಹಾಯಕ ದರ್ಜೆ-3ರಲ್ಲಿ 556 ಹುದ್ದೆಗಳಿಗೆ 2016ರ ಜ.14ರಿಂದ ಫೆ.4ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಐಟಿಐ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿದ ಲಕ್ಷಾಂತರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಕೂಡ ಬರೆದಿದ್ದಾರೆ. ಅದರಲ್ಲಿ ಕೆಲ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಿ ನೇಮಕ ಆದೇಶ ಪ್ರತಿ ಕೂಡ ನೀಡಲಾಗಿದೆ. ಇನ್ನು ಕೆಲ ಹುದ್ದೆಗಳ ಫಲಿತಾಂಶ ಪ್ರಕಟಿಸದಿರುವುದು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ.

ಫಲಿತಾಂಶ ವಿಳಂಬ: 1,114 ಹುದ್ದೆಗಳಿಗೆ 2018ರ ಅ.6 ಮತ್ತು 7ರಂದು ಪರೀಕ್ಷೆ ನಡೆದಿದೆ. ಅದರಲ್ಲಿ ಆಟೋ ಮೆಕ್ಯಾನಿಕಲ್, ಆಟೋ ಬಾಡಿ ಬಿಲ್ಡರ್, ಆಟೋ ಎಲೆಕ್ಟ್ರಿಷಿಯನ್, ಆಟೋ ಪೇಂಟರ್, ಆಟೋ ವೆಲ್ಡರ್, ಆಟೋ ಮಷಿನಿಸ್ಟ್ ಹುದ್ದೆಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. 2018ರ ಅ.23ರಂದು ಕೀ ಉತ್ತರ ಪ್ರಕಟಿಸಿ ಡಿ.24ರಂದು 1:5 ಅನುಪಾತದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ನಂತರ 2019ರ ಜನವರಿಯಲ್ಲಿ ಮೂಲ ದಾಖಲೆ ಪರಿಶೀಲಿಸಲಾಗಿದೆ. ಆದರೆ ಫಲಿತಾಂಶ ಪ್ರಕಟಿಸಿಲ್ಲ. ನೇಮಕ ವಿಳಂಬದಿಂದಾಗಿ ಸೇವಾವಧಿ ಕಡಿಮೆಯಾಗಿ ಬಡ್ತಿ ಕೂಡ ಸಿಗುವುದಿಲ್ಲ. ನಿಗಮದ ಅಧಿಕಾರಿಗಳು ಇನ್ನುಳಿದ ಹುದ್ದೆಗಳ ಫಲಿತಾಂಶ ಕೂಡಲೇ ಪ್ರಕಟಿಸಿ ನ್ಯಾಯ ಒದಗಿಸಬೇಕು ಎಂಬುದು ನೊಂದ ಅಭ್ಯರ್ಥಿಗಳ ಒತ್ತಾಯ.