ಮುಂದಾಲೋಚನೆ ಇಲ್ಲದ ಕೆಎಸ್​ಆರ್​ಟಿಸಿ ಅಧಿಕಾರಿಗಳಿಂದ ರಸ್ತೆ ದುರಸ್ತಿಗೆ ಮೊದಲು ಹಂಪ್ ತೆರವು

ಬಣಕಲ್: ಕೊಟ್ಟಿಗೆಹಾರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಒಂದಲ್ಲಾ ಒಂದು ಕಾಮಗಾರಿ ನಡೆಯುತ್ತಲೇ ಇರುತ್ತವೆ. ವರ್ಷಕ್ಕೆ ಐದಾರು ಬಾರಿ ಕೌಗೇಟ್, ಕಾಂಪೌಂಡ್ ಕಾಮಗಾರಿ ಮಾಡಲಾಗುತ್ತದೆ. ಈಗ ನಿಲ್ದಾಣಕ್ಕೆ ಬರುವ ರಸ್ತೆ ಕಿತ್ತು ಹೋಗಿದ್ದರೂ ಅದನ್ನು ದುರಸ್ತಿ ಮಾಡುವ ಬದಲು ನಿಲ್ದಾಣದಲ್ಲಿ ಹಾಕಿದ್ದ ಹಂಪ್ ತೆರವುಗೊಳಿಸಲಾಗುತ್ತಿದೆ.

ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ತುರ್ತಾಗಿ ಹಲವು ನಡೆಯಬೇಕಿದೆ. ಆ ಕಾಮಗಾರಿಗಳನ್ನು ನಿರ್ವಹಿಸುವ ಮೊದಲು ಇದ್ದ ಹಂಪ್ ತೆಗೆಯಲಾಗುತ್ತಿದೆ. ಇದರಿಂದ ನಿಲ್ದಾಣದಲ್ಲಿ ಬೀಳುವ ಮಳೆ ನೀರು ಕೊಟ್ಟಿಗೆಹಾರದ ಮುಖ್ಯರಸ್ತೆಗೆ ಬರುತ್ತದೆ. ಹಂಪ್​ಗಳನ್ನು ಅಳವಡಿಸುವ ಮೊದಲು ಮುಂದಾಲೋಚನೆ ಇದ್ದಿದ್ದರೆ ಸರ್ಕಾರದ ಹಣ ಪೋಲಾಗುತ್ತಿರಲಿಲ್ಲ. ಈಗಿರುವ ಹಂಪ್ ತೆರವುಗೊಳಿಸಲು ಪುನಃ ಹಣ ಅಪವ್ಯಯ ಮಾಡಲಾಗುತ್ತಿದೆ. ಇದು ಕೆಎಸ್​ಆರ್​ಟಿಸಿಯ ದೂರದೃಷ್ಟಿಯ ಕೊರತೆಗೆ ಹಿಡಿದ ಕೈಗನ್ನಡಿ.

ನಿಲ್ದಾಣಕ್ಕೆ ಬರುವ ಹಾಗೂ ಹೋಗುವ ರಸ್ತೆಯ ಕಾಂಕ್ರಿಟ್ ಕಿತ್ತುಹೋಗಿದೆ. ಕಬ್ಬಿಣದ ರಾಡ್​ಗಳು ಕಾಣಿಸುತ್ತಿವೆ. ಇಂತಹ ತುರ್ತು ಕಾಮಗಾರಿಯನ್ನು ಮೊದಲು ಮಾಡಬೇಕಿತ್ತು. ಆದರೆ ಹಂಪ್ ತೆರವುಗೊಳಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಶೌಚಗೃಹದ ನೀರು ಹೇಮಾವತಿ ನದಿ ಸೇರುತ್ತಿರುವ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯನ್ನು ತೋರಿಸುತ್ತದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಕೊಟ್ಟಿಗೆಹಾರ ಮಧ್ಯ ಭಾಗದಲ್ಲಿರುವ ಜಾಗವನ್ನು ಈ ಹಿಂದೆ ಕೆಎಸ್​ಆರ್​ಟಿಸಿಗೆ ಹಸ್ತಾಂತರ ಮಾಡಲಾಗಿತ್ತು. ಅಧಿಕಾರಿಗಳಿ ನಿರ್ಲಕ್ಷ್ಯಂದ ಅಲ್ಲಿ ಸ್ವಚ್ಛತೆಯೇ ಮಾಯವಾಗಿದೆ. ಇದೀಗ ಮಳೆಗಾಲದಲ್ಲಿ ಅನುಕೂಲವಾಗುತ್ತಿದ್ದ ಹಂಪ್ ತೆರವುಗೊಳಿಸುತ್ತಿರುವುದು ಇನ್ನೊಂದು ಪ್ರಮಾದ. ಹಾಗೆಯೇ ಮಳೆಗಾಲದಲ್ಲಿ ನೀರು ಹೇಮಾವತಿ ನದಿ ಸೇರದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಫ್ರೆಂಡ್ಸ್ ಆಟೋ ಸಂಘದ ಅಧ್ಯಕ್ಷ ದೇವೇಂದ್ರಪ್ಪ.

ಹಂಪ್​ನಿಂದ ಕೌಗೇಟ್​ಗೆ ಹಾನಿಯಾಗುತ್ತಿದ್ದರಿಂದ ತೆರವುಗೊಳಿಸಲಾಗುತ್ತಿದೆ. ಮುಂಭಾಗದ ರಸ್ತೆಯನ್ನು ಶೀಘ್ರವೇ ದುರಸ್ತಿ ಮಾಡಲಾಗುವುದು. ಮಳೆಗಾಲ ಆರಂಭ ಆಗುವಷ್ಟರಲ್ಲಿ ಶೌಚಗೃಹದ ನೀರು ನದಿ ಸೇರದಂತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಕೆಎಸ್​ಆರ್​ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಅನಿಲ್ ತಿಳಿಸಿದ್ದಾರೆ.