ಬೆಂಗಳೂರು: ಕೋರಿಕೆ ಮೇರೆಗೆ 412 ನೌಕರರ ಅಂತರ್ ನಿಗಮ ವರ್ಗಾವಣೆ ರದ್ದು ಮಾಡಿ ರಾಜ್ಯ ರಸ್ತೆ ಸಾರಿಗೆ ಇಲಾಖೆ ಆದೇಶಿಸಿದೆ.
ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಯಲ್ಲಿ ಉತ್ತರ ಕರ್ನಾಟಕದ ಸಾವಿರಾರು ನೌಕರರು ಕೆಲಸ ಮಾಡುತ್ತಿದ್ದು, ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಥವಾ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾವಣೆ ಮಾಡಲು ಅನುಕೂಲವಾಗು ವಂತೆ 4 ವರ್ಷಗಳ ಹಿಂದೆ ಅಂತರ್ ನಿಗಮ ವರ್ಗಾವಣೆ ವ್ಯವಸ್ಥೆ ಜಾರಿ ಮಾಡಲಾಗಿದೆ. ಹೀಗೆ ವರ್ಗಾವಣೆಯಾದವರಲ್ಲಿ 412 ನೌಕರರ ವರ್ಗಾವಣೆಯನ್ನು ಕೋರಿಕೆ ಮೇರೆಗೆ ರದ್ದು ಮಾಡಲಾಗಿದೆ.
ನಾಲ್ಕು ನಿಗಮಗಳಿಂದ 18 ಸಾವಿರ ನೌಕರರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 4 ಸಾವಿರ ನೌಕರರ ಅರ್ಜಿ ತಿರಸ್ಕರಿಸಲಾಗಿತ್ತು. ಉಳಿದ 14 ಸಾವಿರ ನೌಕರರ ಪೈಕಿ 3,589 ನೌಕರರನ್ನು ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ 412 ನೌಕರರು ವರ್ಗಾವಣೆ ರದ್ದು ಕೋರಿದ್ದರು.