ನೌಕರರ ಸಮಸ್ಯೆ ಬಗೆಹರಿಸಲಾಗದಿದ್ದರೆ ರಾಜೀನಾಮೆ

ಮೈಸೂರು: ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ನನ್ನಿಂದ ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯುತ್ತೇನೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳ ಕನ್ನಡ ಕ್ರಿಯಾ ಸಮಿತಿಯಿಂದ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಯಾರಿಗೂ ಹೆದರುವುದೂ ಇಲ್ಲ, ಬೆದರುವುದೂ ಇಲ್ಲ. ನನಗೆ ಅಧಿಕಾರದ ಮೇಲೆ ಆಸೆಯೂ ಇಲ್ಲ. ಸಾರಿಗೆ ನೌಕರರ ಸಮಸ್ಯೆ ಪರಿ ಹರಿಸಲು ಸಾಧ್ಯವಾಗದಿದ್ದರೆ ಈ ಸ್ಥಾನವೇ ಬೇಡ . ರಾಜೀನಾಮೆ ನೀಡುವುದಾಗಿ ತಿಳಿಸಿದರು.
ಸಾರಿಗೆ ವ್ಯವಸ್ಥೆ ಬಹಳ ಪ್ರಮುಖವಾದ ವ್ಯವಸ್ಥೆಯಾಗಿದ್ದು, ಸಾಮಾನ್ಯ ಜನರ ಸಂಸ್ಥೆಯಾಗಿದೆ. ಕೆಲದಿನಗಳ ಹಿಂದೆ ಇದನ್ನು ಖಾಸಗೀಕರಣ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅದನ್ನು ಮೊದಲು ವಿರೋಧಿಸಿದ್ದೇ ನಾನು. ಕೆಎಸ್‌ಆರ್‌ಟಿಸಿ ಖಾಸಗೀಕರಣದ ಪ್ರಶ್ನೆಯೇ ಇಲ್ಲ. ನೌಕರರ ಹಿತವನ್ನು ಬಲಿಕೊಡುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆಶ್ವಾಸನೆ ನೀಡಿದರು.
ಖಾಸಗೀಕರಣ ಮಾಡುವುದರಿಂದ ಸಾವಿರಾರು ಮಂದಿ ಚಾಲಕರು ಮತ್ತು ನಿರ್ವಾಹಕರು ಕೆಲಸ ಬಿಡುತ್ತಾರೆ. ಆದ್ದರಿಂದ ಖಾಸ ಗೀಕರಣ ವಿರೋಧಿಸಿದೆ. ಸಾರಿಗೆ ಸಂಸ್ಥೆ ನೌಕರರಿಗೂ ಆರೋಗ್ಯ ಸಂಜೀವಿನಿ ಯೋಜನೆಗೆ ಸೇರ್ಪಡೆಗೊಳಿಸುವ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ. ನೌಕರರ ಸಮಸ್ಯೆ ಪರಿಹರಿಸುತ್ತೇನೆ ಎಂದರು.
ಇಲಾಖೆಯಲ್ಲಿ ಸಣ್ಣ ತಪ್ಪಿಗೆ ಅಮಾನತುಗೊಂಡವರ ಹಿತರಕ್ಷಣೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ತನಿಖೆಯಲ್ಲಿ ನಿರ್ದೋಷಿ ಎಂದು ಕಂಡು ಬಂದರೆ ಅಂತಹವರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. 2 ಕೋಟಿ ರೂ. ಹಣ ಮೀಸಲಿಟ್ಟು ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಪ್ರತಿ ವರ್ಷ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
ನೌಕರರು ಕಲ್ಯಾಣ ಮಂಟಪ ಕಟ್ಟಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ನನ್ನ ಮಗನ ವಿವಾಹವನ್ನು ಸಾಮೂಹಿಕ ವಿವಾಹದಲ್ಲಿ ನೆರವೇರಿಸಿದೆ. ನೀವೂ ನಿಮ್ಮ ಮಕ್ಕಳ ಮದುವೆಯನ್ನು ಸಾಮೂಹಿಕ ವಿವಾಹದಲ್ಲಿ ಮಾಡಿರಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಮಾತನಾಡಿ, ಕನ್ನಡಿಗರು ಬೇಡುವವರಲ್ಲ, ನೀಡುವವರು. ಶಿಕ್ಷಣ ಬೆಳೆದಂತೆ ಜಾತಿ ಕಡಿಮೆಯಾಗುತ್ತದೆ. ಕನ್ನಡ ಭಾಷೆ ಕಲಿಯುವುದರೊಂದಿಗೆ ಇತರ ಭಾಷೆ ಕಲಿಸಬೇಕು. ಬೇರೆ ರಾಜ್ಯದವರಿಗೂ ಕನ್ನಡ ಕಲಿಯಲು ಹೇಳಬೇಕು ಎಂದರು.
ಸಾಹಿತ್ಯ ರತ್ನ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಮಲೆಯೂರು ಗುರುಸ್ವಾಮಿ ಮಾತನಾಡಿ, ಕನ್ನಡ ಉಳಿಯುವುದು ಸಾಹಿತಿಗಳಿಂದ ಅಲ್ಲ. ಭಾಷೆ ಬಳಸುವ ಸಾರ್ವಜನಿಕರಿಂದ ಕನ್ನಡ ಉಳಿಯುತ್ತದೆ ಎಂದರು.
ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ನಿಗಮದ ನೌಕರ ಎ.ಎಂ.ಜಾರ್ಜ್ ಅವರು ದರ್ಪಣ ಲಿಪಿಯನ್ನು ಬರೆಯುವ ಮೂಲಕ ಗಮನ ಸೆಳೆದರು. ಸಾಹಿತಿ ಮಲೆಯೂರು ಗುರುಸ್ವಾಮಿ ನೌಕರರು ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಚಿವರಿಗೆ ಸಲ್ಲಿಸಿದರು. ಶಾಸಕ ತನ್ವೀರ್ ಸೇಠ್, ಸಂಸ್ಕೃತಿ ಚಿಂತಕ ಶಂಕರ್ ದೇವನೂರು, ಕನ್ನಡ ಕ್ರಿಯಾಸಮಿತಿ ಅಧ್ಯಕ್ಷ ವ.ಚ. ಚನ್ನೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಎನ್. ಇಂಗಳಗಿ, ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ವಾಸು, ನಗರ ವಿಭಾಗದ ನಿಯಂತ್ರಣಾಧಿಕಾರಿ ಕೆ.ಎಚ್. ಶ್ರೀನಿವಾಸ್ ಇತರರು ಇದ್ದರು.