ಹಿರಿಯರಿಗೆ ಬೇಕಿಲ್ಲ ಪ್ರತ್ಯೇಕ ಐಡಿ

ಬಾಲಚಂದ್ರ ಕೋಟೆ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವ ಹಿರಿಯ ನಾಗರಿಕರು ಪ್ರಯಾಣದ ಟಿಕೆಟ್ ದರದಲ್ಲಿ ಶೇ.25 ರಿಯಾಯಿತಿ ಪಡೆಯಲು ನಿಗಮ ನೀಡುವ ಪ್ರತ್ಯೇಕ ಗುರುತಿನ ಚೀಟಿ ಹೊಂದಿರಬೇಕು ಎಂಬ ನಿಯಮ ರದ್ದಾಗಿದೆ. ವಯಸ್ಸು ದೃಢೀಕರಣ ಮಾನ್ಯತೆ ಹೊಂದಿರುವ ಯಾವುದಾದರೂ ಗುರುತಿನ ಪತ್ರ ತೋರಿಸಿದರೂ, ಈ ಸೌಲಭ್ಯ ಪಡೆಯಬಹುದು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗರ, ಹೊರ ವಲಯ, ಸಾಮಾನ್ಯ, ವೇಗದೂತ, ಅರೆ ಸುವಿಹಾರಿ, ರಾಜಹಂಸ ಬಸ್‌ಗಳ ಟಿಕೆಟ್ ದರದಲ್ಲಿ ಶೇ.25 ರಿಯಾಯಿತಿ ನೀಡುತ್ತಿದೆ. ಹಿಂದಿನ ನಿಯಮ ಅನುಸಾರ ಈ ಸೌಲಭ್ಯ ಪಡೆಯಲು ನಿಗಮ ವಿತರಿಸುವ ಹಿರಿಯ ನಾಗರಿಕರ ಗುರುತಿನ ಚೀಟಿಯೇ ಹೊಂದಿರಬೇಕಿತ್ತು.

ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆಯನ್ನು ನಿಗಮ ಇದೀಗ ಸ್ಥಗಿತಗೊಳಿಸಿದೆ. ಬದಲಾಗಿ ವಯಸ್ಸು ದೃಢೀಕರಣಕ್ಕೆ ಲಭ್ಯ ಯಾವುದೇ ಗುರುತಿನ ಚೀಟಿ ತೋರಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಸರಳ ನಿಯಮ ಜಾರಿಗೊಳಿಸಿದೆ. ಈಗಾಗಲೇ ವಿತರಿಸಿದ ಗುರುತಿನ ಚೀಟಿಗಳು ವಾಯಿದೆ ತನಕ ಮಾನ್ಯತೆ ಹೊಂದಲಿದೆ.
ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ತಾರೀಕು ಮತ್ತು ವರ್ಷ ನಮೂದಾಗಿರುವ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಇಲಾಖೆ ಸಾರ್ವಜನಿಕ ವಲಯದ ಘಟಕಗಳಿಂದ ವಿತರಿಸಲಾಗಿರುವ ಗುರುತಿನ ಚೀಟಿ, ಉದ್ಯೋಗ ಖಾತರಿ ಕಾರ್ಡ್, ಅಂಗವಿಕಲರು ಹಾಗೂ ಹಿರಿಯ ನಾಗರಿಕ ಕಲ್ಯಾಣ ನಿರ್ದೇಶನಾಲಯ ವಿತರಿಸುವ ಭಾವಚಿತ್ರವಿರುವ ಗುರುತಿನ ಚೀಟಿ ಸಹಿತ ಇನ್ನೂ ಹಲವು ದಾಖಲೆಗಳು ಮಾನ್ಯತೆ ಹೊಂದಿವೆ. ಇವುಗಳಲ್ಲಿ ಯಾವುದಾದರೂ ಒಂದರ ಮೂಲಪ್ರತಿ ತೋರಿಸಿ ರಿಯಾಯಿತಿ ಸೌಲಭ್ಯ ಪಡೆಯಬಹುದು.

60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಪ್ರಯಾಣದ ಟಿಕೆಟ್ ದರದಲ್ಲಿ ಶೇ.25 ರಿಯಾಯಿತಿ ಪಡೆಯಲು ನಿಗಮ ಪ್ರತ್ಯೇಕ ಗುರುತಿನ ಚೀಟಿ ವಿತರಿಸುವುದನ್ನು ಸ್ವಲ್ಪ ಸಮಯದಿಂದ ಸ್ಥಗಿತಗೊಳಿಸಿದೆ. ವಯಸ್ಸು ದೃಢೀಕರಣಕ್ಕೆ ಲಭ್ಯ ಹಾಗೂ ಮಾನ್ಯತೆ ಹೊಂದಿರುವ ಅಧಿಕೃತ ಯಾವುದೇ ಗುರುತಿನ ಪತ್ರ ತೋರಿಸಿ ಸೌಲಭ್ಯ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
– ದೀಪಕ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ

Leave a Reply

Your email address will not be published. Required fields are marked *