ಹನೂರು: ತಾಲೂಕಿನ ಕಾಡಂಚಿನ ಗ್ರಾಮ ಪೊನ್ನಾಚಿಯಲ್ಲಿ ಗುರುವಾರ ಕೆಎಸ್ಸಾರ್ಟಿಸಿ ಬಸ್ ಟಯರ್ ಪಂಕ್ಚರ್ ಆದ ಪರಿಣಾಮ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಪೊನ್ನಾಚಿ ಭಾಗವು ಕಾಡಂಚಿನಿಂದ ಕೂಡಿದ್ದು, ಮರೂರು, ಅಸ್ತೂರು ಇನ್ನಿತರ ಗ್ರಾಮಗಳಿವೆ. ಈ ಮಾರ್ಗಕ್ಕೆ ಸಾರಿಗೆ ಬಸ್ ಸೌಕರ್ಯವನ್ನು ಒದಗಿಸಲಾಗಿದೆ. ಆದರೆ ಸಂಚರಿಸುವ ಬಸ್ ಸುಸ್ಥಿತಿಯಲ್ಲಿಲ್ಲ. ಹಾಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಆಗಾಗ್ಗೆ ಮಾರ್ಗಮಧ್ಯದಲ್ಲಿ ಕೆಟ್ಟು ನಿಲ್ಲುತ್ತಿದೆ. ಇಲ್ಲವೇ ಪಂಕ್ಚರ್ ಆಗುತ್ತಿದೆ. ಅದರಂತೆಯೇ ಬೆಳಗ್ಗೆ 10.45ರಲ್ಲಿ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳಬೇಕಿದ್ದ ಸಾರಿಗೆ ಬಸ್ ಪಂಕ್ಚರ್ ಆಗಿದೆ. ಮತ್ತೊಂದು ಟಯರ್ ಇಲ್ಲದ ಪರಿಣಾಮ ಮಧ್ಯಾಹ್ನದತನಕ ಬಸ್ ಗ್ರಾಮದಲ್ಲಿಯೇ ನಿಲ್ಲುವಂತಾಯಿತು. ಇದರಿಂದ ಕೆಲಸ-ಕಾರ್ಯಗಳ ನಿಮಿತ್ತ ಹನೂರು, ಕೊಳ್ಳೇಗಾಲ ಇನ್ನಿತರ ಕಡೆಗಳಿಗೆ ತೆರಳುವ ಜನರು ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದುನಿಂತು ಆಗಮಿಸಿದ ಖಾಸಗಿ ಬಸ್‌ನಲ್ಲಿ ತೆರಳಿದರೆ, ಇನ್ನು ಕೆಲವರು ಆಟೋಗಳ ಮೂಲಕ ತೆರಳುವಂತಾಯಿತು.
ಈ ಭಾಗಕ್ಕೆ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಕಳೆದ ಒಂದು ತಿಂಗಳ ಹಿಂದೆ ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜತೆಗೆ ಶಾಸಕರ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಸುಸ್ಥಿತಿಯಲ್ಲಿರುವ ಬಸ್ ಬಿಡುವುದರ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸುವುದಾಗಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಎಚ್ಚರಿಸಿದ್ದಾರೆ.
