ಬಸ್‌ನಲ್ಲಿ ಎಡಿಸಿ, ಎಸ್ಪಿ ಪ್ರಯಾಣ

ಬಳ್ಳಾರಿ: ಪರಿಸರ ಸಂರಕ್ಷಣೆ ಜತೆಗೆ ಟ್ರಾಫಿಕ್ ಜಾಮ್ ನಿವಾರಣೆಗೆ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬುಧವಾರ ಪ್ರಯಾಣಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ನಗರದ ಎಸ್ಪಿ ಸರ್ಕಲ್‌ನಿಂದ ದುರ್ಗಮ್ಮ ದೇವಸ್ಥಾನದವರೆಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಎಸ್ಪಿ ಅರುಣ್ ರಂಗರಾಜನ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ, ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಎಸ್.ಆರ್.ಚಂದ್ರಶೇಖರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಬಸ್‌ನಲ್ಲಿ ಟಿಕೆಟ್ ಪಡೆದು ಸಂಚರಿಸಿ ಬಸ್‌ನಲ್ಲಿರುವ ಸುರಕ್ಷಿತ ಸೌಕರ್ಯ ಪರಿಶೀಲಿಸಿದರು.

ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿ ಎಸ್.ಆರ್.ಚಂದ್ರಶೇಖರ್ ಮಾತನಾಡಿ, ಪ್ರತಿ ತಿಂಗಳ ಮೊದಲನೆ ಬುಧವಾರ ಸರ್ಕಾರಿ ಬಸ್‌ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಂಚರಿಸಿ ಸಾರ್ವಜನಿಕರಿಗೆ ಮಾದರಿಯಾಗುತ್ತಿದ್ದಾರೆ. ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಟ್ರಾಫಿಕ್ ಜಾಮ್‌ನಿಂದ ಕಿರಿಕಿರಿಯಾಗುತ್ತಿದೆ. ನಗರದ ಸೌಂದರ್ಯ ಹಾಳಾಗುತ್ತಿದೆ. ಸಾರ್ವಜನಿಕರು ಸಾರಿಗೆ ಬಸ್‌ಗಳಲ್ಲಿ ಸಂಚರಿಸಿದರೆ, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪರಿಸರ ಹಾನಿ ತಡೆಗಟ್ಟುವುದರ ಜತೆಗೆ ಸುರಕ್ಷಿತವಾಗಿರುವ ಬಸ್ ಪ್ರಯಾಣಕ್ಕೆ ಜನರ ಮನವೊಲಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.