ಕೆಎಸ್​ಆರ್​ಟಿಸಿ ಕುಶಲಕರ್ವಿು, ತಾಂತ್ರಿಕ ಹುದ್ದೆಗೆ ಶೀಘ್ರ ಪರೀಕ್ಷೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್​ಆರ್​ಟಿಸಿ) 2 ವರ್ಷದಿಂದ ಖಾಲಿ ಉಳಿಸಿಕೊಂಡಿದ್ದ 840 ಕುಶಲಕರ್ವಿು ಹಾಗೂ ತಾಂತ್ರಿಕ ಸಹಾಯಕ ಹುದ್ದೆ ಭರ್ತಿಗೆ ಕೊನೆಗೂ ಸಿದ್ಧತೆ ಆರಂಭಿಸಿದೆ. ಆಗಸ್ಟ್ ಎರಡು ಅಥವಾ ಮೂರನೇ ವಾರದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.

ಹುದ್ದೆಗೆ 2016ರಲ್ಲಿ ಅರ್ಜಿ ಕರೆಯಲಾಗಿದ್ದರೂ, ಇಲ್ಲಿಯವರೆಗೂ ಪರೀಕ್ಷೆ ನಡೆಸದಿರುವುದರ ಬಗ್ಗೆ ಜು.9ರಂದು ‘ಕೆಎಸ್ಸಾರ್ಟಿಸಿಗೆ ನೇಮಕ ಯಾವಾಗ?’ ಎಂಬ ಶೀರ್ಷಿಕೆಯಡಿ ಸಹಾಯವಾಣಿಗೆ ಬಂದ ದೂರನ್ನು ಆಧಾರವಾಗಿರಿಸಿಕೊಂಡು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.

ಪಾರದರ್ಶಕ ಕಾಯ್ದೆ ಅಡ್ಡಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತು ಇತರೆ ಅಧಿಕೃತ ಸಂಸ್ಥೆಗಳ ಮೂಲಕ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ (ಕ್ಯಾಟ್) ನಡೆಸಿ ಕೆಎಸ್​ಆರ್​ಟಿಸಿ ಹೊಸ ಸಿಬ್ಬಂದಿ ನೇಮಕಾತಿ ಮಾಡುತ್ತಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಹಾಗೂ ಪರೀಕ್ಷೆ ನಡೆಸುವುದಕ್ಕಾಗಿ ನಿಗಮ ಸಂಸ್ಥೆಗಳಿಗೆ ಶುಲ್ಕ ಭರಿಸುತ್ತಿದೆ. ಇತ್ತೀಚೆಗೆೆ ಸಂಸ್ಥೆಗಳು ಪರೀಕ್ಷೆ ನಡೆಸಲು ಹಿಂದೇಟು ಹಾಕುತ್ತಿರುವುದೇ ಕ್ಯಾಟ್ ಪರೀಕ್ಷೆ ವಿಳಂಬವಾಗಲು ಕಾರಣ ಎನ್ನಲಾಗುತ್ತಿದೆ.

ಜತೆಗೆ ತಾಂತ್ರಿಕ ಕಾರಣವೂ ನೇಮಕಾತಿಗೆ ಅಡಚಣೆಯಾಗಿದೆ. ನಿಗಮ 1 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಇತರ ಸಂಸ್ಥೆಗಳಿಗೆ (ಶುಲ್ಕದ ರೂಪದಲ್ಲಿಯೂ ಇರಬಹುದು) ನೀಡಬೇಕಿದ್ದಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಅನ್ವಯ ಟೆಂಡರ್ ಆಹ್ವಾನಿಸಬೇಕು. ಟೆಂಡರ್ ಆಹ್ವಾನಿಸಿದರೆ ಅನನುಭವಿ ಖಾಸಗಿ ಸಂಸ್ಥೆಗಳು ಭಾಗವಹಿಸಿ, ಕಡಿಮೆ ಬಿಡ್ ಸಲ್ಲಿಸುವ ಸಾಧ್ಯತೆಯಿದೆ. ಪರೀಕ್ಷೆ ಸಂದರ್ಭದಲ್ಲಿ ಇಂತಹ ಖಾಸಗಿ ಸಂಸ್ಥೆಗಳ ಎಡವಟ್ಟಿನಿಂದ ಪರೀಕ್ಷೆ ಸುಗಮವಾಗಿ ಸಾಗದಿದ್ದಲ್ಲಿ ನಿಗಮಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ 4(ಜಿ) ನಿಯಮದಿಂದ ಕೆಎಸ್​ಆರ್​ಟಿಸಿಗೆ ವಿನಾಯಿತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಸರ್ಕಾರದಿಂದ ಒಪ್ಪಿಗೆ ದೊರಕಿದ್ದು, ಟೆಂಡರ್ ಆಹ್ವಾನಿಸದೆ ಅಧಿಕೃತ, ಅನುಭವಿ ಸಂಸ್ಥೆಗಳಿಗೆ ಕ್ಯಾಟ್ ಹೊಣೆ ನೀಡಲು ನಿಗಮ ನಿರ್ಧರಿಸಿದೆ.

ಆಗಸ್ಟ್ 2 ಅಥವಾ 3ನೇ ವಾರದಲ್ಲಿ ಕುಶಲಕರ್ವಿು ಹಾಗೂ ತಾಂತ್ರಿಕ ಸಹಾಯಕ ಹುದ್ದೆಗೆ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದೇವೆ ಎಂದು ನಿಗಮದ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಹಿಂದೆ ಸರಿದ ಕೆಇಎ!

ಕೆಎಸ್​ಆರ್​ಟಿಸಿ ಸೇರಿ ಸರ್ಕಾರದ ಇಲಾಖೆಗಳು ಹುದ್ದೆ ಭರ್ತಿಗೆ ಕೆಇಎ, ಐಐಎಸ್​ಸಿ, ಐಐಎಂ, ಐಐಟಿ ಮೂಲಕ ಕ್ಯಾಟ್ ಪರೀಕ್ಷೆ ನಡೆಸುತ್ತಿವೆ. ಈ ಸಂಸ್ಥೆಗಳು ಈಗ ಪರೀಕ್ಷೆ ನಡೆಸುವುದು ತಮ್ಮಿಂದ ಸಾಧ್ಯವಿಲ್ಲ ಎಂದು ಹಿಂದೆ ಸರಿದಿವೆ. ಅಗತ್ಯವಿದ್ದಲ್ಲಿ ಪರೀಕ್ಷೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಕೊಡುವುದಾಗಿ ತಿಳಿಸಿದೆ. ಇದರಿಂದ ಪರೀಕ್ಷೆ ವಿಳಂಬವಾಗದೇ ಇರಲು ಕೆಎಸ್​ಆರ್​ಟಿಸಿ ಹೊಸ ನಿರ್ಣಯ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರವೂ ಕ್ಯಾಟ್ ಪರೀಕ್ಷೆ ನಡೆಸಲು ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪದವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತಂದು ಕರ್ನಾಟಕ ಲೋಕಸೇವಾ ಆಯೋಗವನ್ನೂ ಕೆಎಸ್​ಆರ್​ಟಿಸಿ ಸೇರ್ಪಡೆಗೊಳಿಸಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ನೇಮಕಾತಿಗೆ ಕ್ಯಾಟ್ ಪರೀಕ್ಷೆ ಹೊಣೆಯನ್ನು ಲೋಕಸೇವಾ ಆಯೋಗಕ್ಕೆ ನೀಡುವ ಸಾಧ್ಯತೆಯಿದೆ.