ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಅಂತರ್ ವಲಯ ಯುವಜನೋತ್ಸವ ಸ್ಪರ್ಧೆಯಲ್ಲಿ ಮಂಗಳೂರಿನ ಎಸ್ ಡಿಎಂ ಕಾನೂನು ಮಹಾವಿದ್ಯಾಲಯ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೊದಲ ರನ್ನರ್ ಅಪ್ ಆಗಿ ಬೆಳಗಾವಿಯ ಬಿ.ವಿ. ಬೆಲ್ಲದ ಕಾನೂನು ಕಾಲೇಜು ಹಾಗೂ ಬೆಂಗಳೂರಿನ ಬಿಷಪ್ ಕಾಟನ್ ವುಮೆನ್ಸ್ ಕ್ರಿಶ್ಚಿಯನ್ ಲಾ ಕಾಲೇಜು ತಂಡಗಳು ಎರಡನೇ ರನ್ನರ್ ಅಪ್ ಆಗಿ ಪ್ರಶಸ್ತಿ ಪಡೆದುಕೊಂಡಿವೆ.

ಶಾಸ್ತ್ರೀಯ ಸಂಗೀತ, ಸಮೂಹ ಗಾಯನ, ಜಾನಪದ, ಚಿತ್ರಕಲೆ, ನೃತ್ಯ, ರಂಗೋಲಿ, ಮಿಮಿಕ್ರಿ, ಸ್ಕಿಟ್, ಚರ್ಚೆ ಸೇರಿ ವಿವಿಧ ಸ್ಪರ್ಧೆಗಳು ನಡೆದವು.
ಸಮಾರೋಪದಲ್ಲಿ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಧಾರವಾಡ ಬಾಲವಿಕಾಸ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಯುವಜನೋತ್ಸವದಲ್ಲಿ ಕಾನೂನು ವಿದ್ಯಾರ್ಥಿಗಳು ಸಾಂಸತಿಕ ಲೋಕದಲ್ಲಿ ತಮ್ಮದೆ ಆದ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ ಆತ್ಮವಿಶ್ವಾಸ ಮತ್ತು ಪ್ರಯತ್ನದಿಂದ ಪ್ರತಿಭೆ ಪ್ರದರ್ಶಿಸಿದ್ದಾರೆ. ಪ್ರತಿಭೆ ಇದ್ದವರು ಸ್ವಾರ್ಥವನ್ನು ಬಿಟ್ಟು ಪ್ರಾಮಾಣಿಕತೆಯಿಂದ ಶ್ರಮಿಸಿದರೆ ಉನ್ನತ ಯಶಸ್ಸನ್ನು ಪಡೆಯಬಲ್ಲರು ಎಂದು ಹೇಳಿದರು.
ಪ್ರತಿಭೆಯು ಶ್ರೀಮಂತ ಮತ್ತು ಬಡವನೆಂದು ಭೇದ ಮಾಡುವುದಿಲ್ಲ. ಕಲೆ ಮತ್ತು ಸಂಸ್ಕಾರ ಇದ್ದವನು ಬದುಕಿನೊಂದಿಗೆ ಜಗತ್ತನ್ನೆ ಗೆಲ್ಲಬಲ್ಲ, ಸೋಲು ಗೆಲವು ಎಂಬುದು ಸ್ಪರ್ಧೆಯ ಎರಡು ಮುಖಗಳು
ಗೆಲುವನ್ನು ತಲೆಗೇರಿಸಿಕೊಳ್ಳದೆ ಸೋಲನ್ನು ಹೃದಯಕ್ಕೆ ಇಳಿಸಿಕೊಳ್ಳದೇ ಮುನ್ನಡೆಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಸಿ. ಬಸವರಾಜು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಕೇತ ನಾವೆಲ್ಲರು ಒಂದೇ ಎಂಬುದು. ಸ್ಪರ್ಧೆಯುಲ್ಲಿ ಭಾಗವಹಿಸುವುದು ಕೇವಲ ಗೆಲುವಿಗೋಸ್ಕರವಲ್ಲ ಮನಃಶಾಂತಿ ಮತ್ತು ಆನಂದಕ್ಕಾಗಿ ಎಂದರು.
ಕುಲಸಚಿವೆ ಗೀತಾ ಕೌಲಗಿ, ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ಸಂಯೋಜಕ ಡಾ. ಕೆ.ಸಿ. ಗಿರೀಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ರಶ್ಮಿ ಕೌಶಿಕ ಪ್ರಾರ್ಥಿಸಿದರು, ಚೇತನಾ ಸ್ವಾಗತಿಸಿದರು, ಪ್ರಿಯಾ ಹೊನ್ನರಡ್ಡಿ ಪರಿಚಯಿಸಿದರು. ಅಂದಾನಮ್ಮ ಬಳ್ಳಾರಿ ವರದಿ ವಾಚನ ಮಾಡಿದರು, ವೈಭವಿ ದೇಸಾಯಿ ವಂದಿಸಿದರು, ಶ್ರವಣ ಕಾರ್ಯಕ್ರಮ ನಿರೂಪಿಸಿದರು.