ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ಮಧ್ಯೆ ಬೇಸ್ ಸೆಮಿಸ್ಟರ್ ಗೆ ಸಂಬಂಧಿಸಿ ಜ. 23ರಂದು ನಡೆದ ಕಾಂಟ್ರಾಕ್ಟ್- 1 ವಿಷಯದ ಮಾದರಿ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳಿದಂತೆ ಯಾವುದೇ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಬಗ್ಗೆ ದೂರುಗಳು ಇಲ್ಲ, ಈ ಟನೆ ನಂತರ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಇನ್ನಷ್ಟು ಎಚ್ಚರಿಕೆಯಿಂದ ನಡೆಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ತನಿಖೆ ನಂತರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಕಂಡು ಬಂದರೆ ಮರು ಪರೀಕ್ಷೆ ನಡೆಸುವ ಬಗ್ಗೆ ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳಲಿದೆ. ಹಾಗಾಗಿ ವಿದ್ಯಾರ್ಥಿಗಳು ಈ ವಿಷಯದಲ್ಲಿ ಭಯಪಡುವುದು ಬೇಡ ಎಂದರು.
ಕಳೆದ ಜನೆವರಿ 20ರಿಂದ ಪರೀಕ್ಷೆಗಳು ನಡೆಯುತ್ತಿವೆ. ಜನೆವರಿ 21ರಂದು ಕಾನೂನು ವಿದ್ಯಾರ್ಥಿಗಳ ಟೆಲೆಗ್ರಾಮ್ ಗುಂಪೊಂದರಲ್ಲಿ ಅರ್ಜುನ ಎಂಬಾತ ಪ್ರಶ್ನೆ ಪತ್ರಿಕೆ ಬೇಕಿದ್ದರೆ ಅಥವಾ ಒಂದೇ ಸಾರಿ ಪಾಸಾಗಬೇಕಿದ್ದರೆ ಬೆಂಗಳೂರಿನ ಒಂದು ಕಾಲೇಜಿನ ಸಿಬ್ಬಂದಿ ಒಬ್ಬರನ್ನು ಸಂಪರ್ಕಿಸುವಂತೆ ಸಂದೇಶ ಹರಿಬಿಟ್ಟಿದ್ದಾನೆ. ಇದನ್ನು ತಿಳಿದ ಆ ಕಾಲೇಜಿನ ಸಿಬ್ಬಂದಿ ವಿಶ್ವವಿದ್ಯಾಲಯದ ಪರೀಕ್ಷೆ ವಿಭಾಗಕ್ಕೆ ದೂರು ನೀಡಿದ್ದಾರೆ.
ಇದೇ ರೀತಿ ಬೆಂಗಳೂರಿನ ಕಾಲೇಜಿನ ಮಹಿಳಾ ಶಿಕ್ಷಕರೊಬ್ಬರು ಜ. 22ರಂದು ಪರೀಕ್ಷೆ ವಿಭಾಗಕ್ಕೆ ಇಮೇಲ್ ಸಂದೇಶ ಕಳುಹಿಸಿ, ತಮ್ಮ ಹಾಗೂ ಕಾಲೇಜಿನ ಹೆಸರು, ಮೊಬೈಲ್ ನಂಬರನ್ನು ಗುಂಪಿನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ನನ್ನ ಹೆಸರು ಕೆಡಿಸಿದ್ದಾರೆ. ಇದರಿಂದ ನಾನೂ ಕೂಡ ನೊಂದಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಟೆಲೆಗ್ರಾಮ್ನಲ್ಲಿ ಬಂದ ಪ್ರಶ್ನೆಗಳನ್ನು ಪರೀಕ್ಷೆ ವಿಭಾಗದ ಸಹಾಯಕ ಕುಲಸಚಿವರಿಗೆ ಪರೀಸಲು ಕಳುಹಿಸಲಾಗಿತ್ತು. ಬೆಂಗಳೂರು ವ್ಯಾಪ್ತಿಯ ಸ್ಕಾಡ್ ಟೀಂನ ಕೆ.ಎನ್. ವಿಶ್ವನಾಥ ಅವರಯ ಪರಿಶೀಲಿಸಿದ್ದಾರೆ.
ಜ. 23ರಂದು ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಟೆಲೆಗ್ರಾಮ್ ಬಂದಿರುವ ಪ್ರಶ್ನೆಗಳು ಹೋಲಿಕೆಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲ ಸಂಗತಿಗಳನ್ನು ಮುಂದಿಟ್ಟುಕೊಂಡು ಸೈಬರ್ ಕ್ರೈಂ ಗೆ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂರು ದೂರು ದಾಖಲಾಗಿವೆ.
ಈ ಬಗ್ಗೆ ವಿಶ್ವವಿದ್ಯಾಲಯಕ್ಕೆ ಅಧಿಕೃತ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಸಚಿವರು ವಿವರಿಸಿದರು.
ಕಾನೂನು ವಿವಿ ವ್ಯಾಪ್ತಿಯಲ್ಲಿ 130 ಕಾಲೇಜುಗಳಿವೆ. 113 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ರಾಜ್ಯಾದ್ಯಂತ 50 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ ಎಂದರು.
ಕುಲಸಚಿವೆ ಅನುರಾಧಾ ವಸ್ತ್ರದ, ಹಣಕಾಸು ಅಧಿಕಾರಿ ಸಂಜೀವಕುಮಾರ ಗೋಷ್ಠಿಯಲ್ಲಿದ್ದರು.