ಮಾಜಿ ಶಾಸಕಿ ವಿರುದ್ಧ ಜನರ ಆಕ್ರೋಶ

ಶಿವಮೊಗ್ಗ: ಹೊಳೆಹೊನ್ನೂರು ಭಾಗಕ್ಕೆ ಕೆಎಸ್​ಆರ್​ಟಿಸಿ ಬಸ್​ಗಳ ಅವಶ್ಯಕತೆ ಇಲ್ಲವೆಂದು ಹೇಳಿದ್ದಾರೆಂಬ ವದಂತಿ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರ ಎದುರೇ ನೂರಾರು ಜನರು ಮಾಜಿ ಶಾಸಕಿ ಶಾರಾದಾ ಪೂರ್ಯಾನಾಯ್ಕ ವಿರುದ್ಧ ಅಸಮಾಧಾನ ಹೊರಹಾಕಿದರು.

ಹೊಳೆಹೊನ್ನೂರು, ಕೈಮರ, ಆನವೇರಿ ಭಾಗಕ್ಕೆ ಗ್ರಾಮಾಂತರ ಸಾರಿಗೆ ಬಸ್​ಗಳ ಸಂಚಾರ ಅವಶ್ಯಕತೆ ಹೆಚ್ಚಿದೆ. ಆದರೆ ಮಾಜಿ ಶಾಸಕಿ ಶಾರಾದಾ ಪೂರ್ಯಾನಾಯ್ಕ ಖಾಸಗಿ ಬಸ್ ಮಾಲೀಕರ ಲಾಬಿಗೆ ಮಣಿದು ಸಾರಿಗೆ ಬಸ್​ಗಳನ್ನು ಬಿಡುಗಡೆ ಮಾಡದಂತೆ ಸಾರಿಗೆ ಸಚಿವರಿರೂ ತಮಗೆ ಮನವಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂದು ದೂರಿದರು.

ಇದರಿಂದ ಶನಿವಾರ ಜಿಲ್ಲಾ ಉಸ್ತುವಾರಿ ಕಚೇರಿ ಉದ್ಘಾಟನೆಗೆ ಬಂದಿದ್ದ ಸಚಿವರಿಗೆ ತಾಲೂಕು ಕಚೇರಿ ಎದುರೇ ಸಾರ್ವಜನಿಕರು, ಬಿಜೆಪಿ ಮುಖಂಡರ ನೇತೃತ್ವದಲ್ಲಿ ಘೇರಾವ್ ಹಾಕಲು ಯತ್ನಿಸಿದರು.

ತಕ್ಷಣ ಎಚ್ಚೆತ್ತುಕೊಂಡು ಸಾರ್ವಜನಿಕರನ್ನು ಸಮಾಧಾನ ಪಡಿಸಿದ ಸಚಿವ ತಮ್ಮಣ್ಣ, ಹೊಳೆಹೊನ್ನೂರು ಭಾಗಕ್ಕೆ ಸಾರಿಗೆ ಬಸ್​ಗಳ ಅವಶ್ಯಕತೆ ಇಲ್ಲ ಎಂದು ಮಾಜಿ ಶಾಸಕಿ ಹೇಳಿಲ್ಲ. ಬದಲಾಗಿ ಈಗಿರುವ ವೇಳಾಪಟ್ಟಿಗಿಂತ ಹೆಚ್ಚುವರಿಯಾಗಿ ಎರಡು ಬಸ್​ಗಳನ್ನು ಬಿಡುವಂತೆ ಮನವಿ ಮಾಡಿದ್ದಾರೆ ಎಂದು ಸಮಜಾಯಿಸಿ ನೀಡಿದರು. ಅಲ್ಲದೆ, ಸೆ. 29ರೊಳಗೆ ಜಿಲ್ಲೆಯ ವಿವಿಧೆಡೆ ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ಕೆ.ಎಸ್.ಈಶ್ವರಪ್ಪ, ಕೆ.ಬಿ.ಅಶೋಕ್ ನಾಯ್್ಕ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಜಿಪಂ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *