ಮುಂಬೈ: ಕರೊನಾ ಸೋಂಕಿನಿಂದ ಇತ್ತೀಚೆಗೆ ಗುಣಮುಖರಾಗಿರುವ ವೃದ್ಧಿಮಾನ್ ಸಾಹ ಅವರಿಗೆ ಮೀಸಲು ವಿಕೆಟ್ ಕೀಪರ್ ಆಗಿ ಕೆಎಸ್ ಭರತ್ ಅವರನ್ನು ಹೆಸರಿಸಲಾಗಿದೆ. ಆಂಧ್ರದ ಕೆಎಸ್ ಭರತ್ ಐಪಿಎಲ್ ಟೂರ್ನಿಯ ವೇಳೆ ಆರ್‌ಸಿಬಿ ತಂಡದ ಆಟಗಾರರಾಗಿದ್ದರು. ಆದರೆ ಪಂದ್ಯ ಆಡುವ ಅವಕಾಶ ಲಭಿಸಿರಲಿಲ್ಲ.
ಇಂಗ್ಲೆಂಡ್ ಪ್ರವಾಸಕ್ಕೆ ಮುಂಬೈನಲ್ಲಿ ಕ್ವಾರಂಟೈನ್ ಆಗಿರುವ ಭಾರತ ತಂಡದ ಜತೆಗೆ ಕೆಎಸ್ ಭರತ್ ಕೂಡ ಇದ್ದಾರೆ. ಸಾಹ ಫಿಟ್ ಆಗದಿದ್ದರೆ ಮಾತ್ರ 27 ವರ್ಷದ ಭರತ್ ಜೂನ್ 2ರಂದು ಲಂಡನ್‌ಗೆ ವಿಮಾನ ಏರಲಿದ್ದಾರೆ. ರಿಷಭ್ ಪಂತ್ ಸದ್ಯ ತಂಡದಲ್ಲಿ ಮೊದಲ ಆಯ್ಕೆಯ ಕೀಪರ್ ಆಗಿದ್ದಾರೆ.
ಇದನ್ನೂ ಓದಿ: ದೇಶದ 13 ಸಾವಿರ ಕ್ರೀಡಾಪಟು, ಕೋಚ್‌ಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ!
ಭಾರತ ಎ ತಂಡದ ಪರ ಆಡಿ ಪಳಗಿರುವ ಭರತ್ ಕಳೆದ ಐಪಿಎಲ್ ಹರಾಜಿನಲ್ಲಿ ಮೂಲಬೆಲೆ 20 ಲಕ್ಷ ರೂಪಾಯಿಗೆ ಆರ್‌ಸಿಬಿ ತಂಡದ ಪಾಲಾಗಿದ್ದರು. ಕಳೆದ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯ ವೇಳೆಯೂ ಭರತ್ ಮೀಸಲು ಕೀಪರ್ ಆಗಿದ್ದರು. ರಣಜಿ ಟ್ರೋಫಿ ಇತಿಹಾಸದಲ್ಲಿ ತ್ರಿಶತಕ ಸಿಡಿಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಕೆಎಸ್ ಭರತ್ ಹೊಂದಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20 ದಿನಾಂಕ ನಿಗದಿ, ಐಪಿಎಲ್ಗೆ ಮತ್ತೊಂದು ತಲೆನೋವು!