More

  ಕೆ.ಎಸ್​.ಅಶ್ವತ್ಥ್​ 10ನೇ ವರ್ಷದ ಪುಣ್ಯಸ್ಮರಣೆ; ಆತ್ಮದ ರೂಪದಲ್ಲಿ ಅವರಿನ್ನೂ ಜೀವಂತ

  ‘ನಾಗರಹಾವು’ ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರಾಗಿ ಜನರ ಮನದಲ್ಲಿ ಅಚ್ಚೊತ್ತಿರುವ ಹಿರಿಯ ನಟ ಕೆ.ಎಸ್.ಅಶ್ವತ್ಥ್ ಅವರು ಎಲ್ಲರನ್ನೂ ಅಗಲಿ ಜ.18ಕ್ಕೆ ಒಂದು ದಶಕ. ಅವರಿಲ್ಲದೆ ಕಳೆದ ಹತ್ತು ವರ್ಷ, ಅವರ ಬದುಕು, ಚಿತ್ರಗಳು, ಸಾಧನೆ, ಕೊನೆಯ ದಿನಗಳ ಬಗ್ಗೆ ಪುತ್ರ, ನಟ ಶಂಕರ್ ಅಶ್ವತ್ಥ್ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದು ಹೀಗೆ…

  ‘ತಂದೆ ಅಗಲಿ ಒಂದು ದಶಕವಾದರೂ ಇನ್ನೂ ಬದುಕಿದ್ದಾರೆ, ಆತ್ಮದ ರೂಪದಲ್ಲಿ ನನ್ನೊಂದಿಗಿದ್ದು ನನ್ನ ತಪು್ಪಗಳನ್ನು ತಿದ್ದಿ, ಜೀವನ ಹೇಗೆ ನಡೆಸಬೇಕು ಎಂದು ಮಾರ್ಗದರ್ಶನ ಮಾಡುತ್ತಿದ್ದಾರೆ ಅನಿಸುತ್ತದೆ. ನಾನು ಯಾವುದೇ ಕೆಲಸ ಮಾಡುವಾಗಲೂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಹೇಳಿದ್ದ ಮಾತುಗಳೇ ಕಷ್ಟದಲ್ಲಿದ್ದಾಗ ನನಗೆ ಆತ್ಮಸ್ಥೈರ್ಯ ತುಂಬುತ್ತವೆ’ ಎನ್ನುತ್ತಾರೆ ನಟ ಶಂಕರ್.

  ನಾನು ತಂದೆಯವರನ್ನೇ ಕೇಂದ್ರವನ್ನಾಗಿಸಿ ಕಥೆ ಬರೆದು ಧಾರಾವಾಹಿ ನಿರ್ದೇಶಿಸಲು ಮುಂದಾಗಿದ್ದೆ. ಅವರಿಗೆ ಕಥೆ ಇಷ್ಟವಿದ್ದರೂ ಅಭಿನಯಿಸಲು ಒಪ್ಪಿರಲಿಲ್ಲ. ಕಾರಣ ಈ ಹಿಂದೆ ನಾನು ಔಷಧಂಗಡಿ ಇಟ್ಟು ಹಾನಿ ಮಾಡಿಕೊಂಡಂತೆ, ನಿರ್ದೇಶನದ ಮೂಲಕವೂ ಸೋಲನುಭವಿಸಿದರೆ ಎಂಬ ಭಯ. ಈ ಬಗ್ಗೆಯೇ ಯೋಚಿಸುತ್ತ ಮಲಗಿದ್ದ ಅವರಿಗೆ ಇದ್ದಕ್ಕಿದ್ದಂತೆ ಬ್ರೇನ್ ಸ್ಟ್ರೋಕ್ ಆಯಿತು. ಅವರ ಅನಾರೋಗ್ಯಕ್ಕೆ ನಾನೇ ಕಾರಣನಾದೆ ಎಂಬ ಪಾಪಪ್ರಜ್ಞೆ ನನ್ನಲ್ಲಿ ಸದಾ ಕಾಡುತ್ತದೆ ಎಂದು ನೋವು ತೋಡಿಕೊಂಡರು ನಟ ಶಂಕರ್ ಅಶ್ವತ್ಥ್.

  ಕೆ.ಎಸ್.ಅಶ್ವತ್ಥ್ ಅವರಿಗೆ ನಿರ್ಮಾಪಕರ ಮೇಲೆ ಅಪಾರ ಪ್ರೀತಿ-ಗೌರವ. ಅವರು ಕಡಿಮೆ ಸಂಭಾವನೆ ಪಡೆಯುತ್ತಿದ್ದದ್ದು ಕೂಡ ಇದೇ ಕಾರಣಕ್ಕೆ. ನಿರ್ಮಾಪಕರು ಕೆಲವೊಮ್ಮೆ ಒತ್ತಾಯ ಮಾಡಿ ಹೆಚ್ಚು ಹಣ ಕೊಡಲು ಮುಂದಾದರೂ ಪಡೆಯದ ಸ್ವಾಭಿಮಾನಿ. ‘ನಟನಾದವ ನಿರ್ಮಾಪಕರಿಗೆ ಹೊರೆ ಆಗಬಾರದು. ಚಿತ್ರರಂಗದಲ್ಲಿ ಇರುವರೆಗೂ ಅವಕಾಶಗಳು ಬರುತ್ತಲೇ ಇರಬೇಕು. ಹೆಚ್ಚು ಸಂಭಾವನೆ ಕೇಳುತ್ತಾನೆ ಎಂದು ನಿರ್ವಪಕರು ತಿರಸ್ಕರಿಸಬಾರದು’ ಎಂದು ತಂದೆ ಹೇಳಿದ ಮಾತನ್ನು ಶಂಕರ್ ಸ್ಮರಿಸಿಕೊಂಡರು.

  ಲಕ್ಷಾಂತರ ಅಭಿಮಾನಿಗಳೇ ಅವರ ಸಂಪಾದನೆ

  371 ಚಿತ್ರಗಳಲ್ಲಿ ಕೆ.ಎಸ್.ಅಶ್ವತ್ಥ್ ಅಭಿನಯಿಸಿದ್ದರು. ಆದರೆ ಯಾವತ್ತೂ ಹಣಕ್ಕೆ ಆಸೆಪಟ್ಟವರಲ್ಲ. ‘ಬದುಕಿದ್ದಾಗ ನಾವು ಏನು ಸಂಪಾದಿಸಿದ್ದೇವೆ ಎಂಬುದು ಸತ್ತ ಮೇಲೆ ತಿಳಿಯುತ್ತದೆ’ ಎಂದು ಹೇಳುತ್ತಿದ್ದರು. ಅದು ಗೊತ್ತಾಗಿದ್ದು ಅವರು ಸತ್ತ ದಿನವೇ. ಅವರು ಸಂಪಾದಿಸಿದ್ದು ಲಕ್ಷಾಂತರ ಅಭಿಮಾನಿಗಳನ್ನು, ಮೈಸೂರು ದಸರಾ ಬಿಟ್ಟರೆ ಅಷ್ಟೊಂದು ಜನ ಸೇರಿದ್ದು ಅವರ ಅಂತಿಮ ದರ್ಶನದ ವೇಳೆ ಮಾತ್ರ ಎನ್ನುತ್ತಾರೆ ಶಂಕರ್.

  ತಂದೆಯಂತೆಯೇ ಮಗ ಕೂಡ ಸ್ವಾಭಿಮಾನಿ

  ಕೆ.ಎಸ್.ಅಶ್ವತ್ಥ್ ಯಾರ ಹತ್ತಿರವೂ ಸಹಾಯಹಸ್ತ ಚಾಚಿದವರಲ್ಲ. ಅನಾರೋಗ್ಯದ ಸಂದರ್ಭ ಕೆಲವರು ಹಣದ ರೂಪದಲ್ಲಿ ಸಹಾಯಕ್ಕೆ ಮುಂದಾದಾಗ ನಯವಾಗಿಯೇ ತಿರಸ್ಕರಿಸಿದವರು. ‘ಜನರ ಅಭಿಮಾನ ದುಡ್ಡಿನಿಂದ ಅಳೆಯುವ ವ್ಯಕ್ತಿ ನಾನಲ್ಲ’ ಎಂದಿದ್ದರು. ಅವರ ಅನಾರೋಗ್ಯದ ವಿಷಯ ತಿಳಿದು ಸರ್ಕಾರವೇ ಎಲ್ಲ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ ‘ಅಶ್ವತ್ಥ್ ಜನಪ್ರಿಯತೆ ದುರುಪಯೋಗ ಮಾಡಿಕೊಂಡರು’ ಎಂದು ಜನರು ಮಾತನಾಡಬಾರದು ಎಂದು ಆ ಎಲ್ಲ ಸೌಲಭ್ಯಗಳನ್ನು ನಿರಾಕರಿಸಿದರು ಎಂದು ಕೆ.ಎಸ್.ಅಶ್ವತ್ಥ್ ಅವರ ಸ್ವಾಭಿಮಾನವನ್ನು ಪುತ್ರ ನೆನಪಿಸಿಕೊಂಡರು.

  ನಾನು ಚಿತ್ರರಂಗಕ್ಕೆ ಸೇರುವಾಗ ‘ಕಲೆಗೆ ಬೆಲೆ ಕೊಡಬೇಕು. ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಅದನ್ನೇ ಸ್ಪೂರ್ತಿಯಾಗಿ ಪಡೆದು, ಪಾತ್ರಕ್ಕೆ ನ್ಯಾಯ ಒದಗಿಸಬೇಕು. ಹಣಕ್ಕೆ ಆಸೆ ಪಡದೆ, ಪರರಿಗೆ ಕೇಡು ಬಯಸದೆ ನ್ಯಾಯಮಾರ್ಗದಲ್ಲಿ ನಡೆಯುವುದಾದರೆ ಮಾತ್ರ ಚಿತ್ರರಂಗಕ್ಕೆ ಸೇರು’ ಎಂದು ತಂದೆ ಹೇಳಿದ್ದರು ಎನ್ನುತ್ತಾರೆ ಶಂಕರ್.

  ಈಗ ನಾನು ಊಬರ್ ಕಾರ್ ಓಡಿಸುತ್ತಿದ್ದೇನೆ, ಹೆಂಡತಿ ಕೇಟರಿಂಗ್ ನಡೆಸುತ್ತಿದ್ದಾಳೆ. ಸಹಾಯ ಮಾಡಿ ಎಂದು ಯಾರ ಹತ್ತಿರವೂ ಹೋಗಿಲ್ಲ. ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಅದನ್ನೇ ನಮ್ಮ ತಂದೆ ಕಲಿಸಿದ್ದು. ಅವರು ಈಗ ಇದ್ದಿದ್ದರೆ ಸಂತಸ ಪಡುತ್ತಿದ್ದರು ಎಂದರು ನಟ ಶಂಕರ್ ಅಶ್ವತ್ಥ್.

  ಆಸ್ಪತ್ರೆ ಖರ್ಚಿಗಾಗಿ ಪ್ರಶಸ್ತಿ ಮಾರಾಟ

  ಅವರು ದುಡಿದ ಹಣವನ್ನೆಲ್ಲ ಬ್ಯಾಂಕ್​ನಲ್ಲಿಟ್ಟು, ಅದರಿಂದ ಬರುವ ಬಡ್ಡಿಯಲ್ಲಿಯೇ ಜೀವನ ನಡೆಸಬಹುದು ಅಂದುಕೊಂಡಿದ್ದರು. ಆದರೆ ದುರದೃಷ್ಟವಶಾತ್ ಬ್ಯಾಂಕ್ ಬಡ್ಡಿದರ ದಿಢೀರನೆ ಕುಸಿದು, ತಿಂಗಳಿಗೆ ಬರುತ್ತಿದ್ದ 15 ಸಾವಿರ ರೂ., ಆಗ ಎಂಟು ಸಾವಿರ ರೂ.ಗೆ ಇಳಿಯಿತು. ಪ್ರಶಸ್ತಿಗಳನ್ನು ಮಾರಿ ಬಂದ ಹಣದಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು ಎಂದು ಅಂದಿನ ಸಂದರ್ಭದ ಬಗ್ಗೆ ಕಣ್ಣೀರಿಟ್ಟು ಹೇಳುತ್ತಾರೆ ಶಂಕರ್ ಅಶ್ವತ್ಥ್.

  | ಶಿವರಾಯ ಪೂಜಾರಿ, ಬೆಂಗಳೂರು

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts