ನಾಲೆಗಳಿಗೆ ಹರಿದ ನೀರು

ಕೆ.ಆರ್.ಸಾಗರ: ಒಣಗುತ್ತಿರುವ ಬೆಳೆಗಳ ರಕ್ಷಣೆಗಾಗಿ ನಾಲೆಗಳಿಗೆ ನೀರು ಬಿಡುವಂತೆ ರೈತರು ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ 12 ಗಂಟೆಗೆ ನಾಲೆಗಳಿಗೆ ನೀರು ಬಿಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕೆ.ಆರ್.ಸಾಗರ ಅಣೆಕಟ್ಟೆಯಿಂದ ವಿಶ್ವೇಶ್ವರಯ್ಯ ನಾಲೆಗೆ 1,000 ಕ್ಯೂಸೆಕ್ ನೀರು ಬಿಡಲಾಯಿತು. ನಂತರ ನೀರಿನ ಹೊರಹರಿವನ್ನು 2,500 ಕ್ಯೂಸೆಕ್‌ಗೆ ಹೆಚ್ಚಿಸಿದ್ದು, ಹಂತ ಹಂತವಾಗಿ ಹೆಚ್ಚಳ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಾಲೆಗೆ ಬಿಡುತ್ತಿರುವ ನೀರನ್ನು ಜನ ಜಾನುವಾರು ಕುಡಿಯಲು ಮತ್ತು ಬೆಳೆದು ನಿಂತಿರುವ ಬೆಳೆಗಳಿಗೆ ಮಾತ್ರ ಬಳಸಬೇಕಾಗಿದ್ದು, ಯಾರೂ ಹೊಸದಾಗಿ ಬೆಳೆ ಹಾಕದಂತೆ ಕಾವೇರಿ ನೀರಾವರಿ ನಿಗಮದ ಮಂಡ್ಯ ವೃತ್ತದ ಅಧೀಕ್ಷಕ ಅಭಿಯಂತರ ರಾಮಕೃಷ್ಣ ಮನವಿ ಮಾಡಿದ್ದಾರೆ.

124.80 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಬುಧವಾರ ಬೆಳಗ್ಗೆ 6ಗಂಟೆ ವೇಳೆಗೆ 90.90 ಅಡಿ (16.480) ನೀರಿತ್ತು. ಕಟ್ಟೆಗೆ ಕೇವಲ 2578 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು 2500 ಕ್ಯೂಸೆಕ್ ಇದೆ. ಕೇವಲ 10 ದಿನಗಳ ಕಾಲ ನಾಲೆಗಳಲ್ಲಿ ನೀರು ಹರಿಯಲಿದೆ.

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 122.40 (45.156) ಇದ್ದು, ಒಳಹರಿವು 71,964 ಕ್ಯೂಸೆಕ್, ಹೊರಹರಿವು 80,667 ಕ್ಯೂಸೆಕ್ ಇತ್ತು.

ರೈತರಲ್ಲಿ ಆತಂಕ ಹೆಚ್ಚಳ: ಕೇವಲ 10 ದಿನಗಳ ಕಾಲ ನಾಲೆಗಳಿಗೆ ನೀರು ಬಿಡುವುದಾಗಿ ಹೇಳಿರುವುದರಿಂದ ಕೊನೆ ಭಾಗವಿರಲಿ, ಮಧ್ಯಭಾಗದ ರೈತರಲ್ಲೇ ಆತಂಕ ಮನೆ ಮಾಡಿದೆ. ಹೊಸದಾಗಿ ಬೆಳೆ ಹಾಕದಂತೆ ಹೇಳಿದ್ದರೂ, ಕೆಲವೆಡೆ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಹೀಗಾಗಿ ನಮ್ಮ ನಾಲೆಗಳಿಗೆ ನೀರು ಬರುವುದೋ, ಇಲ್ಲವೋ ಎಂಬ ಆತಂಕದಲ್ಲಿ ಮುಳುಗಿದ್ದಾರೆ.

ಕಾವೇರಿ ನೀರಾವರಿ ನಿಗಮ 10 ದಿನಗಳ ಕಾಲ ನೀರು ಬಿಡುವುದಾಗಿ ಹೇಳಿದೆ. ಈ ಪೈಕಿ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡುವುದೇ ಅಥವಾ ಬೆಳೆದು ನಿಂತಿರುವ ಬೆಳೆಗಳಿಗೆ ಮಾತ್ರ ನೀರು ಕೊಡಲಿದೆಯೇ, ಇದನ್ನು ಯಾವ ರೀತಿ ನಿರ್ವಹಣೆ ಮಾಡಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.

ಹೊಸದಾಗಿ ಬೆಳೆ ಹಾಕಬೇಡಿ ಎಂದು ಸರ್ಕಾರ, ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆಗಿದ್ದರೆ ನಾವು ಬೇರೆ ಏನು ಕೆಲಸ ಮಾಡಬೇಕು ಎಂಬ ಪ್ರಶ್ನೆಗಳು ರೈತರಿಂದ ಕೇಳಿಬರುತ್ತಿವೆ. ಬೆಳೆ ಹಾಕಬೇಡಿ ಎನ್ನುವವರು ರೈತರ ಜೀವನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಲಿ. ಎಕರೆಗೆ ಇಷ್ಟು ಪರಿಹಾರ ಅಥವಾ ನೆರವು ನೀಡಲಿ ಎನ್ನುತ್ತಾರೆ ಪ್ರಗತಿಪರ ರೈತ ಮರಿದೇಶಿಗೌಡ.

Leave a Reply

Your email address will not be published. Required fields are marked *