ಕಟ್ಟು ನೀರಿನ ಪದ್ದತಿಯಲ್ಲಿ ನಾಲೆಗಳಿಗೆ ನೀರು

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಕೊಡಲಾಗುವುದು ಎಂದು ಕೆ.ಆರ್.ಎಸ್.ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಎಚ್.ಸಿ.ರಮೇಂದ್ರ ತಿಳಿಸಿದ್ದಾರೆ.

ಹಿಂಗಾರು ಬೆಳೆಗೆ ನೀರು ಹರಿಸಲು ಅವಕಾಶವಿದ್ದು, ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶದಂತೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ವ್ಯಾಪ್ತಿಯಲ್ಲಿ ನೀರು ನಿರ್ವಹಣೆ ಮಾಡಲಾಗುತ್ತಿದೆ. ಅದರನ್ವಯ ಮುಂಗಾರು ಹಂಗಾಮಿಗೆ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಅನ್ವಯ ಯೋಜಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಹರಿಸಲಾಗುತ್ತಿದೆ.

ತತ್ಸಸಂಬಂದ ಹಿಂಗಾರು ಹಂಗಾಮಿಗೆ ನ್ಯಾಯಾಧೀಕರಣ ತೀರ್ಪಿನಲ್ಲಿರುವ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ನಿಗಧಿಪಡಿಸಿದ ವಿಸ್ತೀರ್ಣಕ್ಕೆ ಅನುಗುಣವಾಗಿ ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಕೃಷ್ಣ ರಾಜಸಾಗರ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಹಾಲಿ ನಿಂತಿರುವ ಕಬ್ಬಿನ ಬೆಳೆಗಳಿಗೆ ಮತ್ತು ಮಳೆ ಆಧಾರಿತ ಬೆಳೆಗಳಿಗೆ ನೀರು ಕೊಡಲಾಗುವುದು.

ಅಚ್ಚುಕಟ್ಟಿನ ನಾಲೆಗಳಾದ ವಿಶ್ವೇಶ್ವರಯ್ಯ ಮುಖ್ಯ ನಾಲೆ ಮತ್ತು ಅದರ ಉಪ ನಾಲೆಗಳು (ಸಂಪರ್ಕ ನಾಲೆ ಹೊರತುಪಡಿಸಿ), ಎಡದಂಡೆ ಕೆಳಮಟ್ಟದ ನಾಲೆ, ಕಾವೇರಿ ಶಾಖಾ ನಾಲೆ ಹಳೆ ಮದ್ದೂರು ಶಾಖಾ ನಾಲೆ, ಶಿಂಷಾ ಶಾಖಾ ನಾಲೆ, ಕೌಡ್ಲೆ ಉಪ ನಾಲೆ (9ನೇ ವಿತರಣಾ ನಾಲೆವರೆಗೆ), ಹೊಸ ಮದ್ದೂರು ಶಾಖೆ ನಾಲೆ (31ನೇ ವಿತರಣಾ ನಾಲೆವರೆಗೆ), ಲೋಕಸರ ಶಾಖಾ ನಾಲೆ, ಹೆಬ್ಬಕವಾಡಿ  ಹಾಗೂ ತುರುಗನೂರು ಶಾಖಾ (5ನೇ ವಿತರಣಾ ನಾಲೆವರೆಗೆ) ನಾಲೆಗಳಲ್ಲಿ ಕಟ್ಟು ನೀರಿನ ಪಧ್ಧತಿ ಅಳವಡಿಸಿ ನೀರನ್ನು ಹರಿಸುವ ವ್ಯವಸ್ಥೆ ಮಾಡಲಾಗುವುದು.

ನಾಲೆಗಳಿಗೆ ಮೊದಲನೇ ಕಟ್ಟು ಪದ್ಧತಿಯಲ್ಲಿ ದಿನಾಂಕ 10-1-2019 ರಿಂದ 25-01-2019 ರವರೆಗೆ (15 ದಿನಗಳು), ಎರಡನೇ ಕಟ್ಟು ಪಧ್ಧತಿಯಲ್ಲಿ 9-2-2019 ರಿಂದ 23-2-2019 ರವರೆಗೆ ( 15 ದಿನಗಳು) ಹಾಗೂ 3ನೇ ಕಟ್ಟು ಪದ್ಧತಿಯಲ್ಲಿ 11-3-2019 ರಿಂದ 25-3-2019 ರವರೆಗೆ (15 ದಿನಗಳು) ನೀರನ್ನು ಹರಿಸಲಾಗುವುದು.

ರೈತರು ನಾಲೆಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನಿಗಧಿಪಡಿಸಿರುವ ಬೆಳೆಗಳಿಗೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಂತಿರುವ ಕಬ್ಬಿನ ಬೆಳೆಗಳಿಗೆ ಹಾಗೂ ಅರೆ ನೀರಾವರಿ ಖುಷ್ಕಿ ಬೆಳೆಗಳಿಗೆ ಮಾತ್ರ ನೀರನ್ನು ಸಮರ್ಪಕವಾಗಿ ಹಾಗೂ ಮಿತಬಳಕೆಯಲ್ಲಿ ಉಪಯೋಗಿಸಲು ಕೋರಿದ್ದಾರೆ.

ಹೊಸ ಬೆಳೆಗೆ ಇಲಾಖೆ ಜವಾಬ್ದಾರಿಯಲ್ಲ: ಯಾವುದೇ ಹೆಚ್ಚುವರಿ ಬೆಳೆಯನ್ನು ಹಾಗೂ ಹೊಸ ಬೆಳೆಯನ್ನು ನಿಗಧಿಪಡಿಸಿದ ಕ್ಷೇತ್ರಕ್ಕಿಂತ ಮೀರಿದ್ದಲ್ಲಿ ನೀರಾವರಿ ಇಲಾಖೆಯು ಜವಾಬ್ದಾರರಾಗುವುದಿಲ್ಲ. ಹಾಗೆಯೇ ಕಾವೇರಿ ನಿಯಂತ್ರಣ ಪ್ರಾಧಿಕಾರದ ನಿರ್ದೇಶನದ ಅನ್ವಯ ಅಣೆಕಟ್ಟು ನಾಲೆಗಳಿಗೆ ಬೇಸಿಗೆ/ ಹಿಂಗಾರು ಹಂಗಾಮಿಗೆ ನೀರನ್ನು ಹರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.