ಕೆಆರ್‌ಎಸ್ ತುಂಬಿ ಹರಿದಳು ಕಾವೇರಿ

ಕೆಆರ್‌ಎಸ್/ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆ ಭರ್ತಿಯಾಗಿದ್ದು, ಕಟ್ಟೆಯಿಂದ ಶನಿವಾರ ಸಂಜೆ ವೇಳೆಗೆ 32 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಗರಿಷ್ಠ 124.80 ಅಡಿಯ ಅಣೆಕಟ್ಟೆಗೆ ಬೆಳಗ್ಗೆ 41,961 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 122.70 ಅಡಿಗೇರಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ 123.20 ಅಡಿಗೇರಿದ್ದರಿಂದ ಕೆಆರ್‌ಎಸ್ ಅಧಿಕಾರಿಗಳು ಅಣೆಕಟ್ಟೆ ಗೇಟ್‌ಗಳಿಗೆ ಪೂಜೆ ಸಲ್ಲಿಸಿ 11 ಗೇಟ್‌ಗಳ ಮೂಲಕ 22 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾರಂಭಿಸಿದರು.

4 ಗಂಟೆ ವೇಳೆಗೆ ನೀರಿನ ಮಟ್ಟ 123.50 ಅಡಿಗೇರಿದ ಹಿನ್ನೆಲೆಯಲ್ಲಿ ಇನ್ನೂ 5 ಗೇಟ್‌ಗಳ ಮೂಲಕ ನೀರನ್ನು ಬಿಡಲಾಯಿತು. ಸಂಜೆ 6 ಗಂಟೆ ವೇಳೆಗೆ ಒಳ ಹರಿವು 43,672 ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಕಟ್ಟೆಯಿಂದ 31926 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಒಳಹರಿವಿನ ಪ್ರಮಾಣ ಮತ್ತಷ್ಟು ಅಧಿಕವಾಗುವ ಸಾಧ್ಯತೆಗಳಿದ್ದು, ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನದಿಗೆ ಮತ್ತಷ್ಟು ನೀರನ್ನು ಬಿಡುವ ಸಾಧ್ಯತೆಗಳಿವೆ.

ಕಾವೇರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ, ಅಧೀಕ್ಷಕ ಅಭಿಯಂತರ ಅಮರನಾಥ್, ತಹಸೀಲ್ದಾರ್ ನಾಗೇಶ್, ಕಾವೇರಿ ನಿಗಮದ ಮುಖ್ಯ ಅಭಿಯಂತರ ತ್ರಿಯಂಬಕ, ಕೆಎಸ್‌ಐಎಸ್‌ಎಫ್ ಪಿಎಸ್‌ಐ ಪ್ರಮೋದ್, ಗೋವರ್ದನ್, ಕೆ.ಆರ್.ಎಸ್. ಪಿಎಸ್‌ಐ ಬ್ಯಾಟರಾಯಿಗೌಡ ಮೊದಲಾದ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಸಂಜೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಕೆಆರ್‌ಎಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೆಲ ಪ್ರವಾಸಿಗರು, ಇತ್ತೀಚೆಗೆ ಭದ್ರತೆ ದೃಷ್ಟಿಯಿಂದ ಅಣೆಕಟ್ಟೆಯ ವೀಕ್ಷಣೆಗೆ ಅವಕಾಶ ಸಿಗುತ್ತಿಲ್ಲ. ಇದರಿಂದ ತೀವ್ರ ನಿರಾಸೆ ಆಗುತ್ತಿದೆ ಎಂದು ದೂರಿದರು.

ಅಣೆಕಟ್ಟೆ ವೀಕ್ಷಣೆಗೆ ಭದ್ರತೆ ಒದಗಿಸಿ ಅವಕಾಶ ಕಲ್ಪಿಸಬೇಕೆಂದು ಸಚಿವರನ್ನು ಕೋರಿದರು. ಅದಕ್ಕೆ ಸಚಿವ ಪುಟ್ಟರಾಜು, ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಬೋಟಿಂಗ್ ಸ್ಥಗಿತ, ಕೊಚ್ಚಿಹೋದ ಪಕ್ಷಿ ಗೂಡುಗಳು: ಕಟ್ಟೆಯಿಂದ ಅಧಿಕ ನೀರು ಬಿಟ್ಟ ಪರಿಣಾಮ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ನೀರಿನ ಪ್ರಮಾಣ ಅಧಿಕ ಆಗುತ್ತಿರುವುದರಿಂದ ಮರದ ರೆಂಬೆಗಳಲ್ಲಿ ಪಕ್ಷಿಗಳು ಕಟ್ಟಿದ್ದ ಗೂಡುಗಳು ನೀರಿನಲ್ಲಿ ಕೊಚ್ಚಿಹೋದವು.

ಪಕ್ಷಿಧಾಮಕ್ಕೆ ಬಂದು ದೋಣಿ ವಿಹಾರ ಮಾಡಲು ಕಾದಿದ್ದ ಪ್ರವಾಸಿಗರು ದೋಣಿ ವಿಹಾರ ಸ್ಥಗಿತದಿಂದ ನಿರಾಸೆಯಿಂದ ವಾಪಸ್ ಆಗಬೇಕಾಯಿತು. ದೋಣಿ ವಿಹಾರ ಸ್ಥಗಿತ ಎಂದು ಮಾಧ್ಯಮಗಳಲ್ಲಿ ಶುಕ್ರವಾರ ರಾತ್ರಿ, ಪತ್ರಿಕೆಗಳಲ್ಲಿ ಶನಿವಾರ ಬೆಳಗ್ಗೆ ವರದಿಯಾಗಿದ್ದರೂ ಹಲವು ಪ್ರವಾಸಿಗರು ಆಗಮಿಸಿದ್ದರು.