ಡಿಸ್ನಿಲ್ಯಾಂಡ್​ ನಿರ್ಮಿಸಲು ಕಾನೂನಿನಲ್ಲಿ ಅವಕಾಶವೇ ಇಲ್ಲ: ಸಿಎಸ್​ಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಏನಿದೆ?

ಮಂಡ್ಯ: ಮಂಡ್ಯದ ಕೆಆರ್​ಎಸ್​ ಬಳಿ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕಾವೇರಿ ಮಾತೆಯ ಪ್ರತಿಮೆಯನ್ನೂ ಒಳಗೊಂಡ ಡಿಸ್ನಿಲ್ಯಾಂಡ್​ ಅಭಿವೃದ್ಧಿಗೆ ಕಾನೂನಿನ ತೊಡಕುಗಳಿವೆ.

ಸದ್ಯ ಡಿಸ್ನಿಲ್ಯಾಂಡ್​ ಅಭಿವೃದ್ಧಿಗೆ ನಿಗದಿ ಮಾಡಿರುವ ಜಾಗವೂ ಸೇರಿದಂತೆ ಕೆಆರ್​ಎಸ್​ ಅಣೆಕಟ್ಟೆಯ ಸುತ್ತಲ 2,804 ಹೆಕ್ಟೇರ್​ ಪ್ರದೇಶವನ್ನು ಕೇಂದ್ರ ಸರ್ಕಾರ 09-11-2017ರ ಅಧಿಸೂಚನೆಯಲ್ಲಿ ಸೂಕ್ಷ್ಮ ಪರಿಸರ ವಲಯ ಎಂದು ಗುರುತಿಸಿದ್ದು, ಅಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶಗಳಿಲ್ಲ. ಈ ಕುರಿತು ಆರ್​ಟಿಐ ಕಾರ್ಯಕರ್ತ ರವೀಂದ್ರ ಎಂಬವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಕೇಂದ್ರದ ಅರಣ್ಯ ಇಲಾಖೆ ಹೊರಡಿಸಿರುವ ಅಧಿ ಸೂಚನೆಯ ಪ್ರಕಾರ, ಕೆಆರ್​ಎಸ್​ ಸುತ್ತಲ ಚಿಕ್ಕಯಾರಹಳ್ಳಿ, ಕಟ್ಟೇರಿ, ಹೊಂಗಳ್ಳಿ, ಯಡತಿಟ್ಟು, ಪುಟ್ಟಯ್ಯನಕೊಪ್ಪಲು, ಚಲುವರಸನಕೊಪ್ಪಲು, ಅಗ್ರಹಾರ, ಅರಳುಕುಪ್ಪೆ, ಕರಿಮಂಟಿ, ಪಾಲಹಳ್ಳಿ, ಬೆಳಗೊಳ, ಕಾರೇಕುರ, ಕೆಂಪಲಿಂಗಾಪುರ, ಬಲಮುರಿ, ದುದ್ದ ಘಟ್ಟ ಪ್ರದೇಶಗಳು ವನ್ಯಜೀವಿ ವಲಯಕ್ಕೆ ಸೇರಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ಜತೆಗೆ, ಒಂದು ವೇಳೆ ಡಿಸ್ನಿಲ್ಯಾಂಡ್​ ಕಾಮಗಾರಿ ಕೈಗೊಂಡಿದ್ದೇ ಆದರೆ, ದೇವರಾಜ ಪಕ್ಷಿಧಾಮಕ್ಕೆ ಹಾನಿಯಾಗುವ ಕುರಿತೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.