80 ಅಡಿಗೆ ಕುಸಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ

ಕೆ.ಆರ್.ಸಾಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗದ ಕಾರಣ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿದ್ದು, ಮಂಗಳವಾರ ಸಂಜೆ ನೀರಿನ ಮಟ್ಟ 80 ಅಡಿಗೆ ತಲುಪಿದೆ.
ಗರಿಷ್ಠ ಮಟ್ಟ 124.80 ಅಡಿ ಇರುವ ಅಣೆಕಟ್ಟೆಗೆ ಸದ್ಯ ಒಳಹರಿವು 156 ಕ್ಯೂಸೆಕ್, ಹೊರಹರಿವು 332 ಕ್ಯೂಸೆಕ್ ಇದೆ. ಒಟ್ಟಾರೆ 10.798 (ಗರಿಷ್ಠ 49.452) ಟಿಎಂಸಿ ನೀರಿದೆ. ಅಣೆಕಟ್ಟೆಯಲ್ಲಿ 60 ಅಡಿ ಇರುವ ತನಕ ನೀರನ್ನು ಬಳಕೆ ಮಾಡಬಹುದಾಗಿದೆ.

ಮುಂದಿನ 20ರಿಂದ 30 ದಿನಗಳ ತನಕ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಆದರೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದಂತೆ ತಮಿಳುನಾಡಿಗೆ ಈ ತಿಂಗಳ ಕೋಟಾದಲ್ಲಿ ನೀರು ಬಿಡಬೇಕೆಂದರೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಮೈಸೂರು, ಮಂಡ್ಯ ನಗರಕ್ಕೆ ಪ್ರತಿದಿನ 100 ಕ್ಯೂಸೆಕ್, ಬೆಂಗಳೂರು ನಗರಕ್ಕೆ ಪ್ರತಿದಿನ 800 ರಿಂದ 900 ಕ್ಯೂಸೆಕ್ ನೀರು ಬೇಕು.

ಕಳೆದ ವರ್ಷ ಇದೇ ವೇಳೆಗೆ ಅಣೆಕಟ್ಟೆಯ ನೀರಿನ ಮಟ್ಟ 101.90 ಅಡಿ ಇತ್ತು. ಒಳಹರಿವು 11,297 ಕ್ಯೂಸೆಕ್, ಹೊರಹರಿವು 374 ಕ್ಯೂಸೆಕ್ ಇತ್ತು. 24.335 ಟಿಎಂಸಿ ನೀರು ಸಂಗ್ರಹವಾಗಿತ್ತು.

ಅಣೆಕಟ್ಟೆಯ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಇನ್ನು ಒಂದು ತಿಂಗಳ ತನಕ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಜೂ.20ರಿಂದ ಮಳೆ ಪ್ರಾರಂಭವಾಗುವ ಬಗ್ಗೆ ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಿಂದೆ ಕೂಡ ಜೂನ್ ಅಂತ್ಯದಲ್ಲಿ ಮಳೆ ಪ್ರಾರಂಭವಾಗಿ ಅಣೆಕಟ್ಟೆ ತುಂಬಿರುವ ನಿದರ್ಶನ ಇದೆ.
ರಾಮಕೃಷ್ಣ, ಕಾರ್ಯಪಾಲಕ ಇಂಜಿನಿಯರ್, ಕಾ.ನೀ.ನಿಗಮ, ಕೆ.ಆರ್.ಸಾಗರ


ಕಳೆದ 10 ವರ್ಷಗಳಲ್ಲಿ ನೀರಿನ ಮಟ್ಟದ(ಜೂನ್ 18ರಂದು) ವಿವರ: 2010ರಲ್ಲಿ 79.60 ಅಡಿ, 2011ರಲ್ಲಿ 96.65 ಅಡಿ, 2012ರಲ್ಲಿ 72.35 ಅಡಿ, 2013ರಲ್ಲಿ 71 ಅಡಿ, 2014ರಲ್ಲಿ 72.50 ಅಡಿ, 2015ರಲ್ಲಿ 76.95 ಅಡಿ, 2016ರಲ್ಲಿ 72.92 ಅಡಿ, 2017ರಲ್ಲಿ 67.90 ಅಡಿ, 2018ರಲ್ಲಿ 101.90 ಅಡಿ ದಾಖಲಾಗಿತ್ತು.

Leave a Reply

Your email address will not be published. Required fields are marked *