ನದಿಗೆ ಹರಿದ ಕಾವೇರಿ

ಕೆಆರ್​ಎಸ್/ಶ್ರೀರಂಗಪಟ್ಟಣ: ಕನ್ನಂಬಾಡಿ ಕಟ್ಟೆ ಭರ್ತಿಯಾದ್ದರಿಂದ ಶನಿವಾರ ಸಂಜೆ 32 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಸಿಎಂ ಕುಮಾರಸ್ವಾಮಿ ಜು.20ರಂದು ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ. ಗರಿಷ್ಠ 124.80 ಅಡಿಯ ಅಣೆಕಟ್ಟೆಗೆ 41,961 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 123.50 ಅಡಿಗೇರಿದ್ದರಿಂದ 50,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತ ಗೊಳಿಸಲಾಗಿದೆ. ಮರದ ರೆಂಬೆಗಳಲ್ಲಿ ಪಕ್ಷಿಗಳು ಕಟ್ಟಿದ್ದ ಗೂಡುಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಜಲಾಶಯಗಳಿಗೆ ನೀರು ಹೆಚ್ಚಳ: ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯದಲ್ಲಿ ಶನಿವಾರ 46,000 ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. 2,284 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 2282.10 ಅಡಿ ನೀರು ಸಂಗ್ರಹವಾಗಿದೆ. ಹಾಸನದ ಗೊರೂರಿನ 2922 ಅಡಿ ಗರಿಷ್ಠ ಮಟ್ಟದ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಶನಿವಾರ 2919.37 ಅಡಿ ತಲುಪಿದೆ. ಕೊಡಗಿನ ಹಾರಂಗಿ ಜಲಾಶಯದಲ್ಲಿ 2856.6 ಅಡಿ (2859) ನೀರಿದ್ದು, ಒಳಹರಿವು 1324 ಕ್ಯೂಸೆಕ್, ಹೊರಹರಿವು 15085 ಕ್ಯೂಸೆಕ್ ಇದೆ. ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಅಣೆಕಟ್ಟೆಗೆ 76,527 ಕ್ಯೂಸೆಕ್ ನೀರು ಹರಿದುಬಂದಿದ್ದು, ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 66.02 ಟಿಎಂಸಿ ಅಡಿ ತಲುಪಿದೆ. ಅಣೆಕಟ್ಟೆ ಭರ್ತಿಗೆ 10.25 ಅಡಿ ಬಾಕಿ ಇದೆ. ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯಕ್ಕೆ 27001 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 543.30 ಮೀಟರ್​ಗೆ ಏರಿಕೆಯಾಗಿದೆ.

ಕೊಚ್ಚಿ ಹೋದ ಯುವಕ

ಕನ್ನಂಬಾಡಿ ಕಟ್ಟೆಯಿಂದ ನೀರನ್ನು ನದಿಗೆ ಹರಿಸಿದ್ದರ ಅರಿವಿಲ್ಲದೆ ನದಿ ಮಧ್ಯ ಹೋಗಿದ್ದ ಯುವಕನೊಬ್ಬ ಕೊಚ್ಚಿ ಹೋಗಿದ್ದರೆ, ಮತ್ತೊಬ್ಬನನ್ನು ಮೀನುಗಾರರು ರಕ್ಷಿಸಿದ್ದಾರೆ. ಬಂಗಾರದೊಡ್ಡಿ ನಾಲಾ ಅಣೆಕಟ್ಟು ಪಕ್ಕದ ಗೂಳಿತಿಟ್ಟಿನಲ್ಲಿ ನದಿಯ ದ್ವೀಪದ ನಡುವೆ ಸಿಲುಕಿದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಮಹದೇವು(33) ಎಂಬುವರನ್ನು ರಕ್ಷಿಸಲಾಗಿದೆ. ಆದರೆ, ಕೊಚ್ಚಿಹೋದ ಮೈಸೂರು ಮೂಲದ ವ್ಯಕ್ತಿಯ ವಿವರ ತಿಳಿದುಬಂದಿಲ್ಲ. ಈ ಇಬ್ಬರೂ ಪ್ರತ್ಯೇಕವಾಗಿ ನದಿಯ ನಡುವಿನ ಬಂಡೆಗಳ ಮೇಲೆ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.