ಕೃಷ್ಣಾ ನದಿ ಪ್ರವಾಹಕ್ಕೆ ಅಪಾರ ಬೆಳೆ ಹಾನಿ

ರಬಕವಿ/ಬನಹಟ್ಟಿ: 15 ದಿನಗಳಿಂದ ಮಹಾರಾಷ್ಟ್ರ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಸಮೀಪದ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

ನದಿ ಅಕ್ಕಪಕ್ಕದಲ್ಲಿರುವ ಜಮೀನಿಗೆ ಗುರುವಾರ ರಾತ್ರಿಯಿಂದ ನೀರು ನುಗ್ಗುತ್ತಿದ್ದು, ಕಬ್ಬು, ಮೆಕ್ಕೆಜೋಳ ಸೇರಿ ಇನ್ನಿತರ ಮುಂಗಾರು ವಾಣಿಜ್ಯ ಬೆಳೆಗಳು ನೀರಿನಲ್ಲಿ ಮುಳುಗುತ್ತಿವೆ. ರಬಕವಿ/ಬನಹಟ್ಟಿ ತಾಲೂಕಿನ ಮದನಮಟ್ಟಿ, ಹಳಿಂಗಳಿ ತಮದಡ್ಡಿ, ಅಸ್ಕಿ ಸೇರಿ ನದಿ ತೀರದಲ್ಲಿರುವ ಅನೇಕ ಗ್ರಾಮಗಳ ಬೆಳೆಗಳು ನೀರಿನಿಂದ ಆವೃತ್ತವಾಗಿವೆ.

ನೀರಿನ ಮಟ್ಟ ಇದೇ ರೀತಿ ಏರಿಕೆಯಾದರೆ ಅಸ್ಕಿ ಗ್ರಾಮದ ಸುತ್ತ ನೀರು ಆವರಿಸಿಕೊಳ್ಳುವ ಸಾಧ್ಯತೆಗಳಿವೆ.

ಹಿಪ್ಪರಗಿ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಹಿನ್ನೀರು ಮಹೇಷವಾಡಗಿ ಬ್ಯಾರೇಜ್​ದಿಂದ ಸರಿದು ರಬಕವಿ/ಬನಹಟ್ಟಿ ನಗರಗಳಿಗೆ ಹೊಂದಿಕೊಂಡಿರುವ ಹಳ್ಳಗಳಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿದೆ.