ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡಲು ಮಹಾರಾಷ್ಟ್ರಕ್ಕೆ ಮನವಿ

ಬೆಳಗಾವಿ: ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ಕೊಯ್ನ ಜಲಾಶಯದಿಂದ ಕರ್ನಾಟಕದ ಕೃಷ್ಣಾ ನದಿಗೆ ಬೇಸಿಗೆಯಲ್ಲಿ 4 ಟಿಎಂಸಿ ನೀರು ಹರಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ನೇತೃತ್ವದ ತಂಡ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಒಳಗೊಂಡು ಕೃಷ್ಣಾ ನದಿ ತೀರದ ಸುಮಾರು 200 ಹಳ್ಳಿಗಳ ಜನರಿಗೆ ಇದರಿಂದ ನೆರವು ದೊರೆಯಲಿದೆ. ಕುಡಿಯುವ ನೀರು, ಕೃಷಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಅಥಣಿ ಬಾಗಲಕೋಟೆ ಜಿಲ್ಲೆಯ ಬಳಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಇರುವುದಿಲ್ಲ. ಇದರಿಂದ ಈ ಭಾಗದ ಜನರ ತೊಂದರೆ ಅನುಭವಿಸಬೇಕಾಗುತ್ತದೆ. ಕೃಷ್ಣಾ ನದಿಯಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಮಹಾರಾಷ್ಟ್ರ ಸರ್ಕಾರ ಪ್ರತಿವರ್ಷ 4 ಟಿ.ಎಂಸಿ ನೀರು ಬಿಡಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದ ತುಬಚಿ ಬಬಲೇಶ್ವರ ಏತ ನೀರಾವರಿಯಿಂದ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಕೆಲವು ಭಾಗಗಳು ಮತ್ತು ಆಲಮಟ್ಟಿ ಜಲಾಶಯದಿಂದ ಇಂಡಿ ಶಾಖೆ ಕಾಲುವೆ ಮುಖಾಂತರ ಸೊಲ್ಲಾಪುರ ತಾಲೂಕಿನ ಅಕ್ಕಲಕೋಟೆ ಹಾಗೂ ಕೆಲವು ಭಾಗಗಳಿಗೆ ಕುಡಿಯುವ ನೀರು ನೀಡಬೇಕು. ಈ ವಿಷಯದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳಬೇಕು.

ಇದಕ್ಕಾಗಿ ಮಹಾರಾಷ್ಟ್ರ -ಕರ್ನಾಟಕ ರಾಜ್ಯದ ನೀರಾವರಿ ಸಚಿವರ ಅಧಿಕಾರಿಗಳ ಸಭೆ ಕರೆಯಬೇಕು ಎಂದು ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಅವರ ನೇತೃತ್ವದ ನಿಯೋಗವು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿತು. ಇದಕ್ಕೆ ಒಪ್ಪಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಅವರು ಉಭಯ ರಾಜ್ಯಗಳ ಜಲಸಂಪನ್ಮೂಲ ಸಚಿವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಶಾಶ್ವತ ಒಡಂಬಡಿಕೆಗೆ ಜಂಟಿ ರಾಜ್ಯಗಳ ಮಹಾರಾಷ್ಟ್ರ ಮತ್ತು ಕರ್ನಾಟಕ ಜನರ ಹಿತದೃಷ್ಟಿಯಿಂದ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೂಡಲೆ ಅಧಿಕಾರಿಗಳ ಸಭೆ ಕರೆಯುವಂತೆ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನೀರಾವರಿ ಇಲಾಖೆಯ ಕಾರ್ಯದರ್ಶಿ ಅವರಿಗೆ ಮಹಾರಾಷ್ಟ್ರ ಸಿಎಂ ನಿರ್ದೇಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾಂಗಲಿ ಜಿಲ್ಲೆಯ ಲೋಕಸಭೆ ಸದಸ್ಯ ಸಂಜಯ (ಕಾಕಾ) ಪಾಟೀಲ ಅವರು ಕೂಡ ನಿಯೋಗದಲ್ಲಿದ್ದರು.

ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ 4 ಟಿಎಂಸಿ ನೀರಿನ ಹಂಚಿಕೆಗಾಗಿ ಉಭಯ ರಾಜ್ಯಗಳ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೃಷ್ಣ ಬೈರೇಗೌಡ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಒತ್ತಾಯಿಸಿದ್ದನ್ನು ಸ್ಮರಿಸಬಹುದು.