ಹಿರೇರಾಯಕುಂಪಿಯಲ್ಲಿ ನೆರೆಹಾವಳಿ ಭೀತಿ, 8 ಕುಟುಂಬಗಳು ಸ್ಥಳಾಂತರಕ್ಕೆ ಹಿಂದೇಟು

ಅಂಜಳ ಗ್ರಾಮದಲ್ಲಿ ಪರಿಹಾರ ಕೇಂದ್ರ | ಮೀನುಗಾರಿಕೆ ಕುಟುಂಬಕ್ಕೆ ಕಿಟ್ ವಿತರಣೆ

ದೇವದುರ್ಗ ಗ್ರಾಮೀಣ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಶುಕ್ರವಾರ 4.48 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ತಾಲೂಕಿನ ಹಿರೇರಾಯಕುಂಪಿ ಗ್ರಾಮದ ಹಳ್ಳದ ಹೆಚ್ಚಳಗೊಂಡು ಗ್ರಾಮದೊಳಗೆ ಬರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಗ್ರಾಮದ ನದಿ ಹಾಗೂ ಹಳ್ಳದ ದಂಡೆಯಲ್ಲಿರುವ 8 ಕುಟುಂಬಗಳನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲು ತಾಲೂಕು ಆಡಳಿತ ಯತ್ನಿಸಿದರೂ, ಮನೆಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದಾರೆ. 60 ನಿರಾಶ್ರಿತರಿಗೆ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. ಮನೆ ಬಿಟ್ಟು ಬರಲು ಒಪ್ಪದ ಜನರು ಪರಿಹಾರ ಕೇಂದ್ರದಲ್ಲಿ ಊಟ ಮಾಡಿ, ಮತ್ತೆ ಮನೆಗಳತ್ತ ಮುಖ ಮಾಡುತ್ತಿರುವುದು ತಾಲೂಕು ಆಡಳಿತಕ್ಕೆ ಹೊಸ ತಲೆನೋವಾಗಿದೆ.

ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಬುಧವಾರ ಸಂಜೆ ಹಾಗೂ ಗುರುವಾರ ಒಳಹರಿವು ಪ್ರಮಾಣ 3.90 ಲಕ್ಷಕ್ಕೆ ಇಳಿದ ಕಾರಣ, ನದಿಗೆ ಹರಿಸುವ ನೀರಿನ ಪ್ರಮಾಣವೂ ಕಡಿಮೆಯಾಗಿತ್ತು. ಗುರುವಾರ ಸಂಜೆ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿತ್ತು. ಎರಡೂ ಜಲಾಶಯದಲ್ಲಿ ಶುಕ್ರವಾರ ಬೆಳಗ್ಗೆ ಒಳಹರಿವು ಹೆಚ್ಚಾದ ಕಾರಣ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ 4.48 ಲಕ್ಷ ಕ್ಯೂಸೆಕ್ ನೀರು ಹರಿಸಲಾಗಿದೆ. ಇದರಿಂದ ನದಿ ದಂಡೆಯ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೆರೆಹಾವಳಿ ಭೀತಿ ಎದುರಾಗಿದೆ.

ಕಳೆದ ಒಂದು ವಾರದಿಂದ ನದಿಗೆ ಸುಮಾರು 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಂದಿದ್ದರಿಂದ ತಾಲೂಕು ಆಡಳಿತ ಮುಂಜಾಗ್ರತೆ ಕ್ರಮವಾಗಿ ಮ್ಯಾದರಗೋಳ, ಲಿಂಗದಹಳ್ಳಿ, ಅಂಜಳ ಗ್ರಾಮದ 30ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಿದೆ. ಅಲ್ಲದೇ ಗೂಗಲ್ ಹಾಗೂ ಯಾಟಗಲ್ ನದಿ ದಂಡೆಯಲ್ಲಿದ್ದ 43 ಮೀನುಗಾರರ ಕುಟುಂಬಗಳನ್ನೂ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಗುರುವಾರ ಅಂಜಳ ಗ್ರಾಮದ 8 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು.

ಪರಿಹಾರ ಕಿಟ್ ವಿತರಣೆ: ನದಿದಂಡೆ ಬಳಿ ವಾಸವಿದ್ದ 43 ಕುಟುಂಬಗಳಿಗೆ ಹಾಸಿಗೆ, ಹೊದಿಕೆ, ಸಾಬೂನು, ಕೊಬ್ಬರಿ ಎಣ್ಣೆ, ಪೇಸ್ಟ್ ಒಳಗೊಂಡ ಕಿಟ್ ವಿತರಣೆ ಮಾಡಲಾಗಿದೆ. ಅಂಜಳ ಹಾಗೂ ಹಿರೇರಾಯಕುಂಪಿ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೇರೆಡೆ ಸ್ಥಳಾಂತರಗೊಂಡ ಮ್ಯಾದರಗೋಳ, ಅಂಜಳ, ಲಿಂಗದಹಳ್ಳಿ ಗ್ರಾಮಸ್ಥರಿಗೆ ಪಡಿತರ ಧಾನ್ಯ ವಿತರಿಸಲಾಗಿದೆ. ಎರಡು ಮೊಬೈಲ್ ಮೆಡಿಕಲ್ ಸೇರಿ ಅಗತ್ಯ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ವೈದ್ಯರು, ಸಿಬ್ಬಂದಿ ಒಳಗೊಂಡ 8 ತಂಡಗಳನ್ನು ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *