ಇಂದಿನಿಂದ ಕೃಷ್ಣ ಮಠದಲ್ಲಿ ರಥೋತ್ಸವ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಮಂಗಳವಾರ ರಥೋತ್ಸವ ಪ್ರಾರಂಭವಾಗಲಿದ್ದು, ಚಾತುರ್ಮಾಸ್ಯ ಕಾಲದಲ್ಲಿ ಗರ್ಭಗುಡಿ ಸೇರಿದ್ದ ಕೃಷ್ಣನ ಉತ್ಸವಮೂರ್ತಿ ಮತ್ತೆ 6 ತಿಂಗಳು ತೇರನ್ನೇರಿ ರಥಬೀದಿಯಲ್ಲಿ ಕಂಗೊಳಿಸಲಿದೆ.

ದೇವಪ್ರಬೋಧಿನೀ ಏಕಾದಶಿಯಂದು ಸೋಮವಾರ ಚಾತುರ್ಮಾಸ್ಯ ಸಂಪನ್ನಗೊಂಡಿದ್ದು, ಪ್ರಾಚೀನರ ಪರಿಕಲ್ಪನೆಯಿಂತೆ ಶ್ರೀಮನ್ನಾರಾಯಣ ಶಯನದಿಂದ ಎಚ್ಚರಗೊಂಡ ಪರ್ವಕಾಲ ಉತ್ಥಾನ ದ್ವಾದಶಿಯಿಂದ ಉತ್ಸವಾದಿಗಳು ಪ್ರಾರಂಭಗೊಳ್ಳಲಿವೆ. ಹೀಗಾಗಿ ಮಂಗಳವಾರ ದಿನವಿಡೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಮುಂಜಾನೆ 4 ಗಂಟೆಗೆ ಕೊನೆಯ ಪಶ್ಚಿಮ ಜಾಗರಪೂಜೆ ನಡೆಯಲಿದೆ.

ಗರ್ಭಗುಡಿ ಸೇರಿದ್ದ ಉತ್ಸವ ಮೂರ್ತಿ: ಜೂನ್‌ನಲ್ಲಿ ಭಾಗೀರಥಿ ಜನ್ಮದಿನದಂದು ಮಧ್ವಸರೋವರದ ಭಾಗೀರಥಿ ಗುಡಿಯಲ್ಲಿ ತೊಟ್ಟಿಲು ಸೇವೆ ನೆರವೇರಿಸಿದ ಬಳಿಕ ಕೃಷ್ಣನ ಉತ್ಸವ ಮೂರ್ತಿ ಗರ್ಭಗುಡಿ ಸೇರುತ್ತದೆ. ಮಠದಲ್ಲಿ ಉತ್ಸವಾದಿಗಳಿಗೆ ತೆರೆ ಬೀಳುತ್ತದೆ. ನಾಲ್ಕು ತಿಂಗಳು ಕೇವಲ ಚಾಮರ ಸೇವೆ, ರಾತ್ರಿ ಪೂಜೆಯನ್ನು ಪರ್ಯಾಯ ಶ್ರೀಗಳು ನೆರವೇರಿಸುತ್ತಾರೆ. ಉತ್ಥಾನ ದ್ವಾದಶಿಯಂದು ರಾತ್ರಿ 7.15ಕ್ಕೆ ಮಠದಲ್ಲಿ ಉತ್ಸವ ಮುಹೂರ್ತ ಧಾರ್ಮಿಕ ವಿಧಿ ನಡೆಯಲಿದ್ದು, ನವಗ್ರಹ ಪೂಜೆ, ನವಗ್ರಹ ದಾನ ನೆರವೇರಿಸಿದ ಬಳಿಕ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.

ಲಕ್ಷ ದೀಪೋತ್ಸವ ವೈಭವ: ಮಠದಲ್ಲಿ ದ್ವಾದಶಿಯಿಂದ ಹುಣ್ಣಿಮೆವರೆಗೆ 4 ದಿನ ಲಕ್ಷದೀಪೋತ್ಸವ ನಡೆಯಲಿದ್ದು, ಮಂಗಳವಾರ 3 ಗಂಟೆಗೆ ಲಕ್ಷದೀಪೋತ್ಸವದ ಪ್ರಯುಕ್ತ ಹಣತೆ ಇಡುವ ಕಾರ್ಯಕ್ರಮಕ್ಕೆ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಸಾಯಂಕಾಲ 4 ಗಂಟೆಗೆ ಮಧ್ವಸರೋವರದ ಮಂಟಪದಲ್ಲಿ ಉತ್ಥಾನ ದ್ವಾದಶೀ ಪ್ರಯುಕ್ತ ತುಳಸೀ ಕಟ್ಟೆಯಲ್ಲಿ ಕ್ಷೀರಾಬ್ಧಿಪೂಜೆಯನ್ನು ಅಷ್ಟಮಠಾಧೀಶರು ನೆರವೇರಿಸಲಿದ್ದು, 6.30ಕ್ಕೆ ರಥೋತ್ಸವ, ತೆಪ್ಪೋತ್ಸವ ನಡೆಯಲಿದೆ.